ಬೆಳಗಿನ ಜಾವದ ಒಂದು ಗಂಟೆ ಇಡೀ ದಿನದ ಯಶಸ್ಸನ್ನು ನಿರ್ಧರಿಸುತ್ತದೆ” ಎಂಬ ಮಾತಿದೆ. ಹಕ್ಕಿಗಳ ಚಿಲಿಪಿಲಿ, ತಂಪಾದ ಗಾಳಿ ಮತ್ತು ಶಾಂತ ವಾತಾವರಣ ಇರುವ ಮುಂಜಾನೆಯ ಸಮಯವು ಪ್ರಕೃತಿ ನಮಗೆ ನೀಡಿದ ವರ. ಈ ಅಮೂಲ್ಯವಾದ ಸಮಯದಲ್ಲಿ ನಾವು ರೂಢಿಸಿಕೊಳ್ಳುವ ಕೆಲವು ಸರಳ ಅಭ್ಯಾಸಗಳು ನಮ್ಮ ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯನ್ನು ಹೆಚ್ಚಿಸಬಲ್ಲವು. ಯಶಸ್ವಿ ವ್ಯಕ್ತಿಗಳ ದಿನಚರಿಯನ್ನು ಗಮನಿಸಿದರೆ ಅವರ ಮುಂಜಾನೆಯ ಅಭ್ಯಾಸಗಳೇ ಅವರ ಸಾಧನೆಗೆ ಮುಖ್ಯ ಕಾರಣ ಎಂಬುದು ತಿಳಿಯುತ್ತದೆ.
ದಿನವನ್ನು ಪಾಸಿಟಿವ್ ಆಗಿ ಆರಂಭಿಸಲು ಸಹಾಯ ಮಾಡುವ ಕೆಲವು ಮುಖ್ಯ ಅಭ್ಯಾಸಗಳು
ಬೇಗ ಏಳುವುದು
ಸೂರ್ಯೋದಯಕ್ಕಿಂತ ಮುಂಚೆ, ಅಂದರೆ ಬೆಳಿಗ್ಗೆ 5 ರಿಂದ 6ಗಂಟೆಯ ಒಳಗೆ ಏಳುವುದು ಅತ್ಯುತ್ತಮ ಅಭ್ಯಾಸ. ಈ ಸಮಯದಲ್ಲಿ ವಾತಾವರಣದಲ್ಲಿ ಶುದ್ಧ ಆಮ್ಲಜನಕ ಇರುತ್ತದೆ. ಬೇಗ ಏಳುವುದರಿಂದ ನಮಗೆ ದಿನದ ಕೆಲಸಗಳನ್ನು ಯೋಜಿಸಲು ಹೆಚ್ಚಿನ ಸಮಯ ಸಿಗುತ್ತದೆ ಮತ್ತು ದಿನವಿಡೀ ಉತ್ಸಾಹದಿಂದ ಇರಲು ಸಹಾಯವಾಗುತ್ತದೆ.
ಒಂದು ಲೋಟ ಉಗುರುಬೆಚ್ಚಗಿನ ನೀರು
ಎದ್ದ ತಕ್ಷಣ ಕನಿಷ್ಠ ಒಂದು ಅಥವಾ ಎರಡು ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯಬೇಕು. ಇದು ರಾತ್ರಿಯಿಡೀ ನಿರ್ಜಲೀಕರಣಗೊಂಡ ನಮ್ಮ ದೇಹಕ್ಕೆ ಮರುಜೀವ ನೀಡುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ, ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಇದು ರಾಮಬಾಣ.
ಪ್ರಾರ್ಥನೆ ಮತ್ತು ಕೃತಜ್ಞತಾ ಭಾವ
ಕಣ್ಣು ಬಿಟ್ಟ ತಕ್ಷಣ ಮೊಬೈಲ್ ನೋಡುವ ಬದಲು, ಈ ಸುಂದರವಾದ ದಿನವನ್ನು ನೀಡಿದ ಪ್ರಕೃತಿಗೆ ಅಥವಾ ದೇವರಿಗೆ ಧನ್ಯವಾದ ಹೇಳಿ. “ನನ್ನ ಜೀವನ ಸುಂದರವಾಗಿದೆ ಮತ್ತು ಇಂದು ನಾನು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತೇನೆ” ಎಂಬ ಸಕಾರಾತ್ಮಕ ಆಲೋಚನೆಯೊಂದಿಗೆ ದಿನ ಆರಂಭಿಸಿದರೆ, ಇದು ಮನಸ್ಸಿಗೆ ಅಪಾರ ಶಾಂತಿ ನೀಡುತ್ತದೆ.
ಧ್ಯಾನ ಮತ್ತು ಯೋಗ
ಕೇವಲ 10 ರಿಂದ 15ನಿಮಿಷಗಳ ಕಾಲ ಶಾಂತವಾಗಿ ಕುಳಿತು ಧ್ಯಾನ ಮಾಡಿ. ದೀರ್ಘವಾಗಿ ಉಸಿರಾಡುವುದರಿಂದ ಮೆದುಳಿಗೆ ಹೆಚ್ಚಿನ ಆಮ್ಲಜನಕ ಸರಬರಾಜಾಗಿ, ಏಕಾಗ್ರತೆ ಹೆಚ್ಚುತ್ತದೆ. ಯೋಗ ಅಥವಾ ಲಘು ವ್ಯಾಯಾಮ ಮಾಡುವುದರಿಂದ ದೇಹದ ಸ್ನಾಯುಗಳು ಸಡಿಲಗೊಂಡು, ದಿನವಿಡೀ ಚುರುಕಾಗಿರಬಹುದು.
ದಿನದ ಯೋಜನೆ
ಇಂದು ನೀವು ಮಾಡಬೇಕಾದ ಪ್ರಮುಖ ಕೆಲಸಗಳು ಯಾವುವು ಎಂಬುದನ್ನು ಒಂದು ಡೈರಿಯಲ್ಲಿ ಬರೆದಿಡಿ. ಇದರಿಂದ ಸಮಯ ವ್ಯರ್ಥವಾಗುವುದು ತಪ್ಪುತ್ತದೆ ಮತ್ತು ಯಾವುದೇ ಒತ್ತಡವಿಲ್ಲದೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮುಗಿಸಬಹುದು.
ಪೌಷ್ಟಿಕಾಂಶಯುಕ್ತ ಉಪಹಾರ
ಬೆಳಗಿನ ಉಪಹಾರವು ದಿನದ ಅತ್ಯಂತ ಪ್ರಮುಖ ಆಹಾರ. ಇದನ್ನು ಎಂದಿಗೂ ಬಿಡಬೇಡಿ. ಮೊಳಕೆ ಭರಿಸಿದ ಧಾನ್ಯಗಳು, ಹಣ್ಣುಗಳು, ಒಣಹಣ್ಣುಗಳು ಮತ್ತು ಮನೆಯಲ್ಲಿ ಮಾಡಿದ ತಾಜಾ ತಿಂಡಿಗಳನ್ನು ಸೇವಿಸಿ. ಇದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ.



