ಹನಿ ಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಕಲಬುರಗಿ ವೈದ್ಯನಿಂದ 1.16 ಕೋಟಿ ಸುಲಿಗೆ: ಖತರ್ನಾಕ್‌ ಗ್ಯಾಂಗ್ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕಲಬುರಗಿಯ ವೈದ್ಯರೊಬ್ಬರನ್ನು ಹನಿ ಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ 1.16 ಕೋಟಿ ಸುಲಿಗೆ ಮಾಡಿದ್ದ ಮಹಿಳೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಅಳಂದದ ನಾಗರಾಜ್‌, ಬೆಂಗಳೂರಿನ ಮಧು, ಓಂಪ್ರಕಾಶ್‌ ಬಂಧಿತ ಆರೋಪಿಗಳು. ಕಲಬುರಗಿ ಮೂಲದ ವೈದ್ಯರೊಬ್ಬರು ತಾವು ಹನಿಟ್ರ್ಯಾಪ್‌ ಜಾಲಕ್ಕೆ ಸಿಲುಕಿ ವಂಚನೆಗೊಳಗಾದ ಬಗ್ಗೆ ಉಪ್ಪಾರಪೇಟೆ ಠಾಣೆಗೆ ದೂರು ಸಲ್ಲಿಸಿದ್ದರು. ಬಳಿಕ ಈ ಪ್ರಕರಣದ ತನಿಖೆಯನ್ನು ಸಿಸಿಬಿ ವಿಶೇಷ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ಸಂತ್ರಸ್ತ ವೈದ್ಯರ ಸ್ನೇಹಿತ ನಾಗರಾಜ್ ಈ ಪಿತೂರಿಯ ಹಿಂದಿನ ಕಿಂಗ್‌ಪಿನ್ ಎಂಬುದು ತನಿಖೆ ವೇಳೆ ಬಹಿರಂಗಗೊಂಡಿದೆ.

ಎಂಬಿಬಿಎಸ್‌ ಸೀಟು ಕೊಡಿಸುವುದಾಗಿ ದೋಖಾ:

ಖಾಸಗಿ ಕ್ಲಿನಿಕ್ ನಡೆಸುವ ವೈದ್ಯ ತಮ್ಮ ಮಗನಿಗೆ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯಲು ಬಯಸಿದ್ದರು. ವೈದ್ಯರ ಸ್ನೇಹಿತ ನಾಗರಾಜ್ ಬೆಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಭರವಸೆ ನೀಡಿದ್ದ. ಅದಕ್ಕಾಗಿ ಕಂತುಗಳ ಮೂಲಕ 66 ಲಕ್ಷ ರೂಗಳನ್ನು ಆರೋಪಿ ನಾಗರಾಜ್ ಗೆ ಪಾವತಿಸಿರುವುದಾಗಿ ವೈದ್ಯರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ಆರೋಪಿಯು ತನ್ನ ಮಗನಿಗೆ ವೈದ್ಯಕೀಯ ಸೀಟು ಕೊಡಿಸಲು ವಿಫಲವಾದಾಗ, ವೈದ್ಯರು ಹಣವನ್ನು ಹಿಂದಿರುಗಿಸುವಂತೆ ನಾಗರಾಜ್‌ ಬಳಿ ಕೇಳಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಹಣ ವಾಪಸ್ ಬಂದಿಲ್ಲ. ಬದಲಾಗಿ ನಾಗರಾಜ್ ಹಣ ಪಡೆಯಲು ಬೆಂಗಳೂರಿಗೆ ಬರುವಂತೆ ತಿಳಿಸಿದ್ದ. ಜನವರಿ 2020 ರಲ್ಲಿ ಬೆಂಗಳೂರಿಗೆ ಬಂದ ವೈದ್ಯಗೆ ಲಾಡ್ಜ್‌ ಒಂದರಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ.

ಮಹಿಳೆಯರನ್ನು ಕಳಿಸಿ ಹನಿಟ್ರ್ಯಾಪ್
ಮುಂಜಾನೆ ಕೋಣೆಯ ಬಾಗಿಲು ಬಡಿಯುವ ಶಬ್ದ ಕೇಳಿ ವೈದ್ಯ ಬಾಗಿಲು ತೆರೆದಾಗ ಇಬ್ಬರು ಮಹಿಳೆಯರು ಏಕಾಏಕಿ ಒಳಗೆ ನುಗ್ಗಿ ಹಾಸಿಗೆಯ ಮೇಲೆ ಕುಳಿತರು. ತಕ್ಷಣವೇ ಪೊಲೀಸರ ಸೋಗಿನಲ್ಲಿ ಬಂದ ಮೂವರು ವ್ಯಕ್ತಿಗಳು ವೇಶ್ಯಾವಟಿಕೆ ನಡೆಸುತ್ತಿರುವ ಆರೋಪ ಹೊರಿಸಿ ವೈದ್ಯರನ್ನು ಬೆದರಿಸಿದರು.
ವೈದ್ಯರನ್ನು ಆ ಮಹಿಳೆಯರೊಂದಿಗೆ ನಿಲ್ಲಿಸಿ ಫೋಟೋ ಕ್ಲಿಕ್ಕಿಸಿದರು. ವೈದ್ಯರ ಬಳಿ ಇದ್ದ ಚಿನ್ನಾಭರಣ 35 ಸಾವಿರ ರೂ.ಗಳನ್ನು ಕಿತ್ತುಕೊಂಡಿದ್ದರು. ಆಗ ನಾಗರಾಜ್, ಸಹಾಯ ಮಾಡುವ ನೆಪದಲ್ಲಿ ಬಂದು ವೈದ್ಯರ ವಿರುದ್ಧ ವೇಶ್ಯಾವಾಟಿಕೆ ಪ್ರಕರಣ ದಾಖಲಾಗುವುದನ್ನು ತಡೆಯಲು 70 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ.
ವೈದ್ಯರು ತಮ್ಮ ಬಳಿ ಅಷ್ಟು ಹಣ ಇಲ್ಲ ಎಂದು ಹೇಳಿದಾಗ ಸಧ್ಯಕ್ಕೆ 50 ಲಕ್ಷ ರೂ. ಕೊಟ್ಟಿರುವಂತೆ ಹೇಳಿ ವಸೂಲಿ ಮಾಡಿದ್ದ. ಆ ಬಳಿಕ ಪುನಃ ಕರೆಮಾಡಿ ಯುವತಿಯರಿಗೆ ಜಾಮೀನು ಕೊಡಿಸಲು 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ.
ವೈದ್ಯರು ಹಣ ನೀಡಲು ನಿರಾಕರಿಸಿದಾಗ ಆರೋಪಿಗಳು ನಾಲ್ವರು ಅಪರಿಚಿತರನ್ನು ಮನೆಯ ಬಳಿ ಕಳುಹಿಸಿ ಬೆದರಿಕೆ ಹಾಕಲು ಯತ್ನಿಸಿದ್ದಾರೆ. ಆದರೆ ಸಂತ್ರಸ್ತ ವೈದ್ಯ ಧೈರ್ಯ ತಂದುಕೊಂಡು ಪೊಲೀಸ್‌ ಠಾಣೆಗೆ ಬರುವಂತೆ ಅವರಿಗೆ ಪಟ್ಟುಹಿಡಿದಾಗ ಪರಾರಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವೈದ್ಯರು ದೂರು ಸಲ್ಲಿಸಿದ್ದು, ಪೊಲೀಸರು ಇದುವರೆಗೆ ನಾಲ್ವರನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here