ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ 25ರ ಆಸುಪಾಸಿನಲ್ಲಿ ಜನರಿಗೆ ವಿಸ್ಡಮ್ ಟೀತ್ ಕಾಣಿಸಿಕೊಳ್ಳುತ್ತದೆ. ಡವಡೆಯ ಹಿಂಬದಿಯಲ್ಲಿ ಈ ಹಲ್ಲು ಬರುವಾಗ ಹೆಚ್ಚು ನೋವಾಗುವುದರಿಂದ ಎಷ್ಟೋ ಮಂದಿ ಇದನ್ನು ತೆಗೆಸಿಬಿಡುತ್ತಾರೆ.
ಇದೇ ರೀತಿ ನೋವು ತಾಳಲಾರದೆ ವಿಸ್ಡಮ್ ಟೀತ್ ತೆಗೆಸಿಕೊಳ್ಳಲು ಹೋಗಿದ್ದ ಯುವತಿಗೆ ವೈದ್ಯರ ಎಡವಟ್ಟಿನಿಂತ ಮತ್ತೊಂದು ಹಲ್ಲು ಕಿತ್ತು ನೋವನ್ನು ಅನುಭವಿಸುವಂತಾಗಿದೆ.
ವೈದ್ಯರೊಬ್ಬರು ವಿಸ್ಡಂ ಟೀತ್(ಬುದ್ಧಿ ಹಲ್ಲು) ಕೀಳುವ ಬದಲು ಬೇರೆ ಆರೋಗ್ಯಕರವಾಗಿದ್ದ ಹಲ್ಲು ಕಿತ್ತಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ. ಅನ್ಹುಯಿ ಪ್ರಾಂತ್ಯದ ಮುನ್ಸಿಪಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಕೆಗೆ ಬುದ್ಧಿ ಹಲ್ಲು ಬರುತ್ತಿದ್ದ ಕಾರಣ ತುಂಬಾ ನೋವು ಕಾಣಿಸಿಕೊಂಡಿತ್ತು.
ಹಾಗಾಗಿ ಅದನ್ನು ಕೀಳಿಸಲು ಆಸ್ಪತ್ರೆಗೆ ಬಂದಿದ್ದಳು. ಆದರೆ ವೈದ್ಯರು ತಪ್ಪಅಗಿ ಅರ್ಥೈಸಿಕೊಂಡು ಆರೋಗ್ಯಕರ ಹಲ್ಲು ತೆಗೆದಿದ್ದರು. ಬಳಿಕ ತಪ್ಪನ್ನು ಅರಿತ ವೈದ್ಯರು ತಂತಿಹಾಕಿ ಆ ಹಲ್ಲನ್ನು ಅದೇ ಜಾಗದಲ್ಲಿ ಕೂರಿಸಿದ್ದರು. ಇದರಿಂದಾಗಿ ಆಕೆಗೆ ಅಪಾರ ನೋವು ಕಾಣಿಸಿಕೊಂಡಿತ್ತು. ಯಾವುದೇ ಇಂಜೆಕ್ಷನ್ ನೀಡದೆ ಒಂದೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
ಆ ಹಲ್ಲನ್ನು ಮತ್ತೆ ಅಲ್ಲಿ ಫಿಕ್ಸ್ ಮಾಡಲು ಪ್ರಯತ್ನಿಸಿದ್ದರಿಂದ ಒಸಡಿನಲ್ಲಿ ಊತ ಕಾಣಿಸಿಕೊಂಡಿತ್ತು. ದಿನಗಟ್ಟಲೆ ಕೇವಲ ನೀರು ಹೊರತುಪಡಿಸಿ ಏನನ್ನೂ ತಿನ್ನಲು ಸಾಧ್ಯವಾಗಿರಲಿಲ್ಲ. ನಿದ್ರೆಯನ್ನು ಕೂಡ ಹಾಳು ಮಾಡಿತ್ತು. ಇದಕ್ಕೆ ಪರಿಹಾರ ಕೊಡಿ ನೋವು ಕಡಿಮೆ ಮಾಡಿ ಎಂದು ಕೇಳಿಕೊಂಡರೂ ವೈದ್ಯರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ಆಕೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಳು.
ಈ ಸಮಸ್ಯೆಯ ಬಗ್ಗೆ ಆಸ್ಪತ್ರೆ ಅಧಿಕಾರಿಗಳಿಗೆ ಪದೇ ಪದೇ ದೂರು ನೀಡಿದ್ದರೂ ಯಾವುದೇ ಪರಿಹಾರ ಸಿಗಲಿಲ್ಲ ಎಂದು ಆಕೆಯ ಸಹೋದರ ಮಾಹಿತಿ ನೀಡಿದ್ದಾರೆ. ಯಾವುದೇ ಪರಿಹಾರ ಸಿಗದ ಕಾರಣ ಮನಸ್ಸಿಗೆ ನೋವಾಗಿದ್ದು, ಆಕೆ ಸಾಯುವ ನಿರ್ಧಾರ ಮಾಡಿದ್ದಾಳೆ. ಆಸ್ಪತ್ರೆಯಿಂದ ಮನೆಗೆ ಬಂದು, ನಂತರ 11ನೇ ಮಹಡಿಗೆ ತೆರಳಿ ಅಲ್ಲಿಂದ ಹಾರಿ ಮೃತಪಟ್ಟಿದ್ದಾಳೆ.