ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ವೈದ್ಯರೊಬ್ಬರು ಅತಿಯಾದ ಹಿಮಪಾತವಿದ್ದರೂ ಕರ್ತವ್ಯ ಪ್ರಜ್ಞೆ ಮೆರೆದು ಆಸ್ಪತ್ರೆಗೆ ತಲುಪಿ ರೋಗಿಗಳಿಗೆ ಚಿಕಿತ್ಸೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ನಿವಾಸಿ ಮತ್ತು ಪ್ರಸ್ತುತ ಶ್ರೀನಗರದಲ್ಲಿ ವಾಸಿಸುತ್ತಿರುವ ಡಾ. ಬಶರತ್ ಪಂಡಿತ್ ಶೋಪಿಯಾನ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಾಗಿದ್ದಾರೆ.
ಮಂಗಳವಾರ ಬೆಳಗ್ಗೆ 7.30ಕ್ಕೆ ಮನೆಯಿಂದ ಹೊರಟ ಅವರು ಸುಮಾರು 55 ಕಿ.ಮೀ. ಪ್ರಯಾಣವನ್ನು ಪೂರ್ಣಗೊಳಿಸಿದರು. ಶೋಪಿಯಾನ್‌ನಲ್ಲಿ ಮೂರರಿಂದ ನಾಲ್ಕು ಅಡಿಗಳಷ್ಟು ಹಿಮ ಬಿದ್ದಿತು. ಇದರಿಂದಾಗಿ ಅವರ ಕಾರು ಹಿಮದಲ್ಲಿ ಸಿಕ್ಕಿಹಾಕಿಕೊಂಡಿತು.
ಈ ವೇಳೆ ಅವರು ಜೆಸಿಬಿಯಲ್ಲಿ ಕುಳಿತು ಆಸ್ಪತ್ರೆಗೆ ಹೋದ ಅವರು ಬೆಳಗ್ಗೆ 10.30ರ ಸುಮಾರಿಗೆ ಅಲ್ಲಿಗೆ ತಲುಪಿದರು. ಇದೀಗ ವೈದ್ಯರ ನಡೆ ಎಲ್ಲರ ಮೆಚ್ಚುಗೆ ಗಳಿಸಿದೆ.
ಈ ಕುರಿತು ಮಾತನಾಡಿದ ಅವರು, ಬೆಳಗ್ಗೆ ಆಗಿದ್ದರಿಂದ ಹೆಚ್ಚಿನ ರಸ್ತೆಗಳನ್ನು ತೆರವುಗೊಳಿಸಲಾಗಿರಲಿಲ್ಲ. ನಾನು ನಡೆಯಲು ಪ್ರಾರಂಭಿಸಿದೆ. ನಂತರ ಜೆಸಿಬಿ ಬಂತು. ಆದ್ದರಿಂದ ನಾನು ಅದರ ಮೇಲೆ ಹತ್ತಿ ಆಸ್ಪತ್ರೆಗೆ ತೆರಳಿದೆʼ ಎಂದು ತಿಳಿಸಿದರು.
ಇದು ಜವಾಬ್ದಾರಿ ಮತ್ತು ಕರ್ತವ್ಯದ ಪ್ರಜ್ಞೆಯಾಗಿತ್ತು. ನನ್ನ ರೋಗಿಗಳನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ವಿಶೇಷವಾಗಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡುವುದು ಮುಖ್ಯ. ಇಲ್ಲದಿದ್ದರೆ ಅವರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆʼ ಎಂದು ಅವರು ಹೇಳಿದರು.
ಅನೇಕ ರೋಗಿಗಳು ಶಸ್ತ್ರಚಿಕಿತ್ಸೆಗಾಗಿ ಸಾಲುಗಟ್ಟಿ ನಿಂತಿದ್ದರು. ಕೆಲವು ತುರ್ತು ಪರಿಸ್ಥಿತಿಗಳೂ ಇದ್ದವು. ಈ ಭಾರಿ ಹಿಮಪಾತದಲ್ಲಿ ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ದಾಖಲಿಸುವುದು ಕಷ್ಟ ಎಂದರು. ಆ ದಿನ ತಮ್ಮ ವಿಭಾಗವು 10 ಶಸ್ತ್ರಚಿಕಿತ್ಸೆಗಳನ್ನು ಮಾಡಿದೆ. ಎಲ್ಲ ರೋಗಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಅವರು ಹೇಳಿದರು.



