January22, 2026
Thursday, January 22, 2026
spot_img

ನೋವು ನಿವಾರಕ ಹೆಸರಲ್ಲಿ ಸಾ*ವು ನೀಡಿದ ವೈದ್ಯ: 15 ಲಕ್ಷಕ್ಕಾಗಿ ದೊಡ್ಡಪ್ಪ-ದೊಡ್ಡಮ್ಮನನ್ನೇ ಕೊಂದ ಪಾಪಿ!

ಹೊಸದಿಗಂತ ಶಿವಮೊಗ್ಗ:

ಹಣದ ಹಪಾಹಪಿಗೆ ಬಿದ್ದ ವೈದ್ಯನೋರ್ವ ಚಿಕಿತ್ಸೆ ನೀಡುವ ನೆಪದಲ್ಲಿ ತನ್ನದೇ ರಕ್ತಸಂಬಂಧಿ ವೃದ್ಧ ದಂಪತಿಗಳಿಗೆ ಅತಿಯಾದ ಡೋಸ್ ಇಂಜೆಕ್ಷನ್ ನೀಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಭದ್ರಾವತಿಯಲ್ಲಿ ಜರುಗಿದೆ. ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೂತನಗುಡಿ ನಿವಾಸಿಗಳಾದ ಚಂದ್ರಪ್ಪ (78) ಹಾಗೂ ಜಯಮ್ಮ (75) ಕೊಲೆಯಾದ ದುರ್ದೈವಿಗಳು.

ಬಂಧಿತ ಆರೋಪಿ ಡಾ. ಮಲ್ಲೇಶ್, ಮೃತ ಚಂದ್ರಪ್ಪ ಅವರ ತಮ್ಮನ ಮಗ. ವೃತ್ತಿಯಲ್ಲಿ ವೈದ್ಯನಾಗಿದ್ದ ಈತ ಇತ್ತೀಚೆಗೆ ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೀಡಾಗಿದ್ದ. ತನ್ನ ಸಾಲ ತೀರಿಸಲು ದೊಡ್ಡಪ್ಪನ ಬಳಿ 15 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದ. ಅವರು ನಿರಾಕರಿಸಿದಾಗ, ಅವರನ್ನು ಮುಗಿಸಿ ಆಸ್ತಿ ಲೂಟಿ ಮಾಡಲು ಸಂಚು ರೂಪಿಸಿದ್ದ.

ಜನವರಿ 19ರಂದು ದಂಪತಿಗಳ ಮನೆಗೆ ತೆರಳಿದ್ದ ಮಲ್ಲೇಶ್, ಅವರ ಅನಾರೋಗ್ಯದ ಫೈಲ್‌ಗಳನ್ನು ಪರಿಶೀಲಿಸುವ ನಾಟಕವಾಡಿದ್ದಾನೆ. “ನಿಮ್ಮ ನೋವು ಕಡಿಮೆ ಮಾಡುತ್ತೇನೆ” ಎಂದು ನಂಬಿಸಿ, ಶಸ್ತ್ರಚಿಕಿತ್ಸೆಗೆ ಬಳಸುವ ‘ಪ್ರೊಪಫೋಲ್’ ಎಂಬ ಅರವಳಿಕೆ ಮದ್ದನ್ನು ಅತಿಯಾದ ಪ್ರಮಾಣದಲ್ಲಿ ಇಂಜೆಕ್ಷನ್ ಮೂಲಕ ನೀಡಿದ್ದಾನೆ. ಇಂಜೆಕ್ಷನ್ ಪಡೆದ ಕೇವಲ ಐದೇ ನಿಮಿಷದಲ್ಲಿ ವೃದ್ಧ ದಂಪತಿಗಳು ಪ್ರಾಣ ಬಿಟ್ಟಿದ್ದಾರೆ.

ದಂಪತಿಗಳು ಮೃತಪಡುತ್ತಿದ್ದಂತೆ ಅವರ ಮೈಮೇಲಿದ್ದ ಸುಮಾರು 80 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದ ಆರೋಪಿ, ಅದನ್ನು ಮಾರಿ ಸಾಲ ತೀರಿಸಿದ್ದಲ್ಲದೆ, ತನ್ನ ಬ್ಯಾಂಕ್ ಖಾತೆಗೆ 50,000 ರೂ. ಜಮಾ ಮಾಡಿಕೊಂಡಿದ್ದ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ನೇತೃತ್ವದ ತಂಡ ಕೇವಲ 24 ಗಂಟೆಯೊಳಗೆ ಆರೋಪಿಯನ್ನು ಪತ್ತೆ ಹಚ್ಚಿ ಕಂಬಿ ಎಣಿಸುವಂತೆ ಮಾಡಿದೆ.

Must Read