ವೃಕ್ಷಮಾತೆ ತುಳಸಿ ಗೌಡಗೆ ಒಲಿದು ಬಂದ ಡಾಕ್ಟರೇಟ್‌ ಪದವಿ, ಜುಲೈ 3 ರಂದು ಪ್ರದಾನ

ಹೊಸದಿಗಂತ ವರದಿ ಅಂಕೋಲಾ:

ನೂರಾರು ಗಿಡಗಳನ್ನು ಬೆಳೆಸಿ ಸಂರಕ್ಷಿಸುವ ಮೂಲಕ ವೃಕ್ಷಮಾತೆ ಎಂದೇ ಹೆಸರು ಪಡೆದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ ಅವರಿಗೆ ಎರಡನೇ ಬಾರಿ ಡಾಕ್ಟರೇಟ್ ಗೌರವ ಹುಡುಕಿ ಬಂದಿದ್ದು, ಕಲಬುರ್ಗಿಯಲ್ಲಿರುವ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಜುಲೈ 3 ರಂದು ತುಳಸಜ್ಜಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದೆ.

ಕಳೆದ ಕೆಲವು ದಿನಗಳ ಹಿಂದೆ ಪ್ರತಿಷ್ಠಿತ ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ತುಳಸಿ ಗೌಡ ಅವರು ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ಹಸಿರೀಕರಣದ ಮೂಲಕ ಸಮಾಜ ಸೇವೆಗಾಗಿ ತಮ್ಮ ಎರಡನೇ ಗೌರವ ಡಾಕ್ಟರೇಟ್ ಸ್ವೀಕರಿಸಲಿದ್ದಾರೆ.

ಪುಟಪರ್ತಿ ಸತ್ಯಸಾಯಿ ಬಾಬಾ ಅವರ ಮೌಲ್ಯಾಧಾರಿತ ಸಮಗ್ರ ಶಿಕ್ಷಣ ಪದ್ಧತಿಯ ಮೂಲ ತತ್ವದ ಅಡಿಯಲ್ಲಿ ಕಲಬುರ್ಗಿಯಲ್ಲಿ ಸ್ಥಾಪಿಸಲಾಗಿರುವ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವ ಜುಲೈ 3 ರಂದು ಸಂಜೆ 4 ಘಂಟೆಯಿಂದ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವ ರಾಷ್ಟ್ರದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ವಿಶ್ವವಿದ್ಯಾಲಯದ ಸಂಸ್ಥಾಪಕ ಸದ್ಗುರು ಮಧುಸೂಧನ ಸಾಯಿ, ಕುಲಪತಿ ಬಿ.ಎನ್. ನರಸಿಂಹಮೂರ್ತಿ, ಉಪ ಕುಲಪತಿ ಡಾ.ಶ್ರೀಕಾಂತ ಮೂರ್ತಿ ಅವರ ಉಪಸ್ಥಿತಿಯಲ್ಲಿ ತುಳಸಜ್ಜಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು.‌

ತುಳಸಿ ಗೌಡ ಅವರೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸೇವೆಗೆ ಪ್ರೊ.ಅಜಯ ಸೂದ್, ಕ್ರೀಡಾ ಕ್ಷೇತ್ರದಲ್ಲಿನ ಸೇವೆಗೆ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ, ಸಂಗೀತ ಕ್ಷೇತ್ರದಲ್ಲಿ ಆರ್. ಪದ್ಮನಾಭ, ಆರೋಗ್ಯ ಕ್ಷೇತ್ರದಲ್ಲಿ ಸೇವೆಗೆ ನಿಮಾನ್ಸ್ ನ ನರ ವಿಜ್ಞಾನ ತಜ್ಞೆ ಡಾ ಪ್ರತಿಮಾ ಮೂರ್ತಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಗೆ ವಾರಣಾಸಿಯ ವಿಜಯಶಂಕರ ಶುಕ್ಲಾ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!