ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಜವಾಬ್ದಾರಿ ವಿಚಾರದಲ್ಲಿ ಸುದ್ದಿಯಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಹೀಗೊಂದು ಘಟನೆ ನಡೆದಿದ್ದು, ಬೈಕ್ ಅಪಘಾತ ಗಾಯಾಳುವಿನ ಗಾಯದೊಳಗೆ ಬರೋಬ್ಬರಿ 14 ಕಲ್ಲುಗಳಿದ್ದರೂ ಅದನ್ನು ಶುಚಿಗೊಳಿಸದೆ ಹಾಗೆಯೇ ಹೊಲಿಗೆ ಹಾಕಿದ ಪರಿಣಾಮ ಗಾಯ ಉಲ್ಬಣಗೊಂಡು ಗಾಯಾಳು ಕಂಗಾಲಾದ ಘಟನೆ ನಡೆದಿದೆ. ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ಮೂಲಕ ಗಾಯದೊಳಗಿದ್ದ ಕಲ್ಲುಗಳನ್ನು ಹೊರತೆಗೆಯಲಾಗಿದೆ.
ಘಟನೆ
ಕೋಡಿಂಬಾಳ ಗ್ರಾಮದ ಕಲ್ಪುರೆ ನಿವಾಸಿ, ರೈಲ್ವೇ ಉದ್ಯೋಗಿ ಪುರುಷೋತ್ತಮ ಎಂಬವರು ಏ.25ರಂದು ರಾತ್ರಿ ತನ್ನ ಪತ್ನಿಯೊಂದಿಗೆ ಸಂಬಂಧಿಕರ ಮನೆಗೆಂದು ಹೊರಟವರು ಕೋಡಿಂಬಾಳ ಸಮೀಪದ ಉಂಡಿಲ ಎಂಬಲ್ಲಿ ಸ್ಕೂಟಿ ಸ್ಕಿಡ್ ಆಗಿ ಬಿದ್ದು ಅವರ ಮೊಣ ಕಾಲಿಗೆ ಗಾಯವಾಗಿತ್ತು, ಕೂಡಲೇ ಪುರುಷೋತ್ತಮ ಹಾಗೂ ಅವರ ಪತ್ನಿಯನ್ನು ಸ್ಥಳೀಯ ರಮೇಶ್ ಕೊಠಾರಿ, ರಘುರಾಮ ಕುಕ್ಕೆರೆಬೆಟ್ಟು, ಪ್ರಶಾಂತ್ ಕೋಡಿಂಬಾಳ, ದಿನೇಶ್ ಮಾಸ್ತಿ, ಜನಾರ್ಧನ ಅವರು ಸೇರಿಕೊಂಡು ಕಡಬ ಸಮುದಾಯ ಆಸ್ಪತ್ರೆಗೆ ಕರೆ ತಂದಿದ್ದರು, ಈ ವೇಳೆ ಆಸ್ಪತ್ರೆಯ ವೈದ್ಯರು ಪರಿಶೀಲಿಸಿ ಗಾಯಕ್ಕೆ ಸ್ಟಿಚ್ ಹಾಕುವಂತೆ ಸೂಚಿಸಿದ್ದರು. ಬಳಿಕ ದಾದಿಯರು ಹಾಗೂ ಸಿಬ್ಬಂದಿಗಳು ಗಾಯಕ್ಕೆ ಸ್ಟಿಚ್ ಹಾಕಿದ್ದರು. ಅನಂತರ ಪುರುಷೋತ್ತಮ ಹಾಗೂ ಅವರ ಪತ್ನಿಯನ್ನು ಆಸ್ಪತ್ರೆಗೆ ಕರೆತಂದ ಸ್ಥಳೀಯರು ಪುನಃ ಅವರ ಮನೆಗೆ ತಲುಪಿಸಿದ್ದರು.
ಗಾಯ ಉಲ್ಬಣ
ಆದಾದ ವಾರದ ಬಳಿಕವೂ ಗಾಯ ಗುಣವಾಗದೆ, ಉಲ್ಬಣಗೊಂಡಿತ್ತು, ಆ ಬಗ್ಗೆ ಪುರುಷೋತ್ತಮ ಅವರು ಮೇ.4ರಂದು ಕಡಬದ ನಾಡೋಳಿ ಡಯಾಗ್ನಸ್ಟಿಕ್ ಸೆಂಟರ್ ನಲ್ಲಿ ಗಾಯದ ಎಕ್ಸರೆ ತೆಗೆಸಿ ಅಲ್ಲಿಯೇ ಕ್ಲಿನಿಕ್ ನಲ್ಲಿದ್ದ ತಜ್ಞ ವೈದ್ಯರಿಗೆ ತೋರಿಸಿದ್ದರು. ವೈದ್ಯರು ಎಕ್ಸರೆ ಪರಿಶೀಲಿಸಿ ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದರು. ಆ ಹಿನ್ನಲೆಯಲ್ಲಿ ಪುರುಷೋತ್ತಮ ಅವರು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಬರೋಬ್ಬರಿ 14 ಕಲ್ಲು
ಆಸ್ಪತ್ರೆಯಲ್ಲಿ ಮೇ.4ರಂದು ರಾತ್ರಿ ಸರ್ಜರಿ ನಡೆಸಲಾಗಿದ್ದು ಈ ವೇಳೆ ವೈದ್ಯರಿಗೆ ಬರೋಬ್ಬರಿ 14 ಕಲ್ಲುಗಳು ದೊರೆತಿದೆ. ಗಾಯವಾದ ಆ ದಿನವೇ ಸ್ಟಿಚ್ ಮಾಡುವಾಗ ಸರಿಯಾಗಿ ಶುಚಿಗೊಳಿಸಿ ಸ್ಟಿಚ್ ಮಾಡುತ್ತಿದ್ದರೆ ಗಾಯ ಉಲ್ಬಣಗೊಳ್ಳುವ ಪ್ರಮೇಯ ಉಂಟಾಗುತ್ತಿರಲಿಲ್ಲ ಎಂದು ಅಲ್ಲಿನ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.