ಹೊಸದಿಗಂತ ವರದಿ,ಶಿವಮೊಗ್ಗ :
ವೈದ್ಯ ವೃತ್ತಿಗೆ ಹೊಸದಾಗಿ ಪ್ರವೇಶ ಮಾಡುತ್ತಿರುವವರು ವೃತ್ತಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ವಿಕಾಸ ಟ್ರಸ್ಟ್‌ನ ವಿಶ್ವಸ್ಥ ನಟರಾಜ ಭಾಗವತ್ ಆಶಯ ವ್ಯಕ್ತಪಡಿಸಿದರು.
ನ್ಯಾಷನಲ್ ಮೆಡಿಕೋಸ್ ಆರ್ಗನೈಜೇಶನ್ (ಎನ್‌ಎಂಒ) ಮತ್ತು ವಿಕಾಸ ಟ್ರ್ಟ್ ಆಶ್ರಯದಲ್ಲಿ ನಗರದ ಶುಭ ಮಂಗಳ ಸಮುದಾಯ ‘ವನದಲ್ಲಿ ಶನಿವಾರ ಸಿಹಿಮೊಗ್ಗೆ ಸ್ವಾಸ್ಥ್ಯ ಸೇವಾ ಯಾತ್ರಾ ನಗರದಲ್ಲಿ ಮೊದಲ ಬಾರಿಗೆ 50 ಕಡೆ ಒಂದೇ ದಿನ ನಡೆಯುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂ‘ದಲ್ಲಿ ಮಾತನಾಡಿದರು.
ಭಾರತೀಯ ಸಮಾಜದಲ್ಲಿ ವೈದ್ಯರನ್ನು ಭಗವಂತನಿಗೆ ಹೋಲಿಕೆ ಮಾಡಲಾಗಿದೆ. ಹಾಗಾಗಿ ಎಲ್ಲಾ ವೈದ್ಯರೂ ವೃತ್ತಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಪ್ರಯತ್ನವಾದರೂ ಇರಬೇಕು ಎಂದರು.
ನಮ್ಮ ಯಾವುದೇ ಕೆಲಸದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಜೋಡಿಸಿಕೊಳ್ಳಬೇಕು. ಅಲೋಪಥಿಯಿಂದಲೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿಬಿಡುತ್ತದೆ ಎಂದು ಏನಿಲ್ಲ. ಭಾರತದಲ್ಲಿ ಇದಕ್ಕೆ ಸರಿ ಸಮನಾದ ಅನೇಕ ಪದ್ಧತಿಗಳಿವೆ. ಯುನಾನಿ, ಸಿದ್ಧ, ಹೋಮಿಯೋಪಥಿ, ಆಯುರ್ವೇದ, ಸಂಗೀತ, ನೃತ್ಯ ಮೊದಲಾದ ಅನೇಕ ಪ್ರಕಾರಗಳಿವೆ ಎಂದರು.
ಸೇವೆ ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಜೀವನದ ಅವಿಭಾಜ್ಯ ಅಂಗ. ಹಿಂದೆಲ್ಲಾ ಆಹಾರ, ಶಿಕ್ಷಣ ಮತ್ತು ವೈದ್ಯಕೀಯ ಉಚಿತವಾಗಿ ಲಭ್ಯವಾಗುತ್ತಿತ್ತು. 1950ರಿಂದ ಈಚೆಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಗಾಳಿ ಬೀಸಿದ ಪರಿಣಾಮ ಎಲ್ಲದನ್ನೂ ದುಡ್ಡಿನಿಂದ ಅಳೆಯುವ ಪರಿಪಾಠ ಬೆಳೆದಿದೆ. ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಅವಶ್ಯಕತೆ ಇದೆ ಎಂದರು.
ಡಾ.ಸಂಜಯ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಡಾ.ಶಿಲ್ಪಾ, ಡಾ.ಅನಿಲ್, ವಿಕಾಸ ಟ್ರಸ್ಟ್ ಕಾರ್ಯದರ್ಶಿ ಸಚ್ಚಿದಾನಂದ, ಡಾ.ಶೀಲಾ ವಿಜಯ್, ಡಾ.ಮಿಥುನ್, ಡಾ.ಭಗತ್, ಡಾ.ಅನಿಲ್ ಬಾಬು, ಡಾ.ಕಲಾ ಉಪಸ್ಥಿತರಿದ್ದರು.