July 28, 2026
Tuesday, July 28, 2026
spot_img

NEET ಪ್ರತಿಭಟನೆಗೆ ದೆಹಲಿಗೆ ಬಂದ ಸಿಎಂಗೆ KPSC ಹಗರಣ ಕಾಣುತ್ತಿಲ್ಲವೇ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ನೀಟ್ ಅಕ್ರಮ ಖಂಡಿಸಿ ಧರಣಿ ನಡೆಸುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನ್ಯಾಯಕ್ಕಾಗಿ ಬೀದಿಗಿಳಿದಿರುವ KPSC ಪರೀಕ್ಷಾರ್ಥಿಗಳ ಕಷ್ಟ ಕಾಣಿಸುತ್ತಿಲ್ಲವೇ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಖಾರವಾಗಿ ಪ್ರಶ್ನಿಸಿದ್ದಾರೆ. ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ವಿಧೇಯಕದ ಚರ್ಚೆ ವೇಳೆ ಸಂಪೂರ್ಣವಾಗಿ ಕನ್ನಡದಲ್ಲೇ ಮಾತನಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

KPSC ಅಕ್ರಮ ಮತ್ತು 80 ಲಕ್ಷದ ವೆಟರ್ನರಿ ಸೀಟ್ ಹಗರಣ

ತಮ್ಮ ಮಕ್ಕಳಿಗಾಗಿ ನಕಲಿ ದಾಖಲೆ ಸೃಷ್ಟಿಸಿದ ಗಂಭೀರ ಆರೋಪದ ಮೇಲೆ 10 ದಿನಗಳ ಹಿಂದೆಯಷ್ಟೇ ಕೆಪಿಎಸ್‌ಸಿ ಅಧ್ಯಕ್ಷರನ್ನು ಅಮಾನತುಗೊಳಿಸಲಾಗಿದೆ. ಮತ್ತೊಂದೆಡೆ ವೆಟರ್ನರಿ ಕಾಲೇಜಿನ ಪ್ರತಿ ಸೀಟಿಗೆ 80 ಲಕ್ಷ ರೂಪಾಯಿ ಲಂಚ ವಸೂಲಿ ಮಾಡಿರುವ ಪ್ರಕರಣವೂ ಬೆಳಕಿಗೆ ಬಂದಿದೆ. ಈ ಸಾಲು ಸಾಲು ಅಕ್ರಮಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರತಿಯೊಬ್ಬ ಭವಿಷ್ಯದ ಯುವಜನರ ಧ್ವನಿಯಾಗಿ ನಾನು ಮಾತನಾಡುತ್ತಿದ್ದು, ಮುಖ್ಯಮಂತ್ರಿಗಳು ತಕ್ಷಣವೇ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಪಟ್ಟು ಹಿಡಿದರು.

ಶಾಶ್ವತ ಪರಿಹಾರವೇ ದೇಶದ ಯುವಕರ ಆದ್ಯತೆ

ಯುವ ಸಮುದಾಯಕ್ಕೆ ರಾಜಕೀಯ ಕೆಸರೆರಚಾಟ ಬೇಕಾಗಿಲ್ಲ; ಬದಲಿಗೆ ಯಾವುದೇ ಅಕ್ರಮವಿಲ್ಲದ, ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಹಾಗೂ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಯುವಕರ ಭವಿಷ್ಯವನ್ನು ಸುರಕ್ಷಿತಗೊಳಿಸಲು ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !