ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತದ ಯುವ ಕ್ರಿಕೆಟಿಗ ರಿಷಬ್ ಪಂತ್ ಆರೋಗ್ಯ ಸ್ಥಿರವಾಗಿದ್ದು, ಪ್ಲಾಸ್ಟಿಕ್ ಸರ್ಜರಿ ಅಗತ್ಯವಿದ್ದಲ್ಲಿ ಅವರನ್ನು ದಿಲ್ಲಿಗೆ ಏರ್ಲಿಫ್ಟ್ ಮಾಡಲಾಗುವುದು ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ ನಿರ್ದೇಶಕ ಶ್ಯಾಮ್ ಶರ್ಮಾ ಹೇಳಿದ್ದಾರೆ.
ರಿಷಬ್ ಪಂತ್ ಮೂಳೆಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರ ನಿಗಾದಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರನ್ನು ಪರೀಕ್ಷಿಸಿದ ನಂತರ ವಿವರವಾದ ವೈದ್ಯಕೀಯ ಬುಲೆಟಿನ್ ಅನ್ನು ಬಿಡುಗಡೆ ಮಾಡಲಾಗುತ್ತದೆ. ನಂತರ ನಾವು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯ ಡಾ. ಆಶಿಶ್ ಯಾಗ್ನಿಕ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು (ಡಿ.31) ರಿಷಬ್ ಪಂತ್ ಅವರನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಅವರ ಪಾದ, ಮೊಣಕಾಲಿನ ಅಸ್ಥಿರಜ್ಜು ಗಾಯಗೊಂಡಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯತೆ ಬಗ್ಗೆ ಪರೀಕ್ಷೆಯ ಬಳಿಕದ ವರದಿ ಗಮನಿಸಿ ನಿರ್ಧರಿಸಲಾಗುತ್ತದೆ. ಅವರ ಮೆದುಳು, ನರಹುರಿಗೆ ಯಾವುದೇ ಗಾಯವಾಗಿಲ್ಲ. ಆದರೂ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಹಲವು ತಿಂಗಳು ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.