ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರಕಾರ ಚುನಾವಣೆ ಸಮಯದಲ್ಲಿ ಐದು ಗ್ಯಾರಂಟಿಗಳು (Congress Guarantee) ಎಲ್ಲರಿಗೂ ಉಚಿತ ಎಂದು ಹೇಳಿದ್ದರು.ಆದ್ರೆ ಈಗ ಷರತ್ತುಗಳನ್ನು ಹಾಕಿದ್ದಾರೆ. ಇದು ಗ್ಯಾರಂಟಿಗಳ ಮೂಲಕ ಜನರಿಗೆ ದೋಖಾ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಘೋಷಣೆಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಮಾಸಿಕ 200 ಯುನಿಟ್‌ವರೆಗೂ ಉಚಿತ ಎಂದು ಕಾರ್ಟ್ ನೀಡಿದ್ದರು. ಒಂದು ಮನೆಯಲ್ಲಿ 70, ಇನ್ನೊಂದು ಮನೆಯಲ್ಲಿ 80 ಯುನಿಟ್ ಎಷ್ಟೇ ಇರಲಿ. ಇವರು ಹೇಳಿದಂತೆ 200 ಯುನಿಟ್ ಒಳಗೆ ಇದ್ದರೆ ಉಚಿತ ಕೊಡಬೇಕು. ಆದರೆ, ಈಗ ಸಿಎಂ ಮಾತಿನಲ್ಲಿ ವ್ಯತ್ಯಾಸ ಇದೆ. ವಾರ್ಷಿಕ ಎಷ್ಟು ಸರಾಸರಿ ಬಳಕೆ ಮಾಡುತ್ತಾರೆ ಅದರ ಮೇಲೆ ಶೇ. 10 ವಿನಾಯಿತಿ ಅಂತ ಹೇಳಿದ್ದಾರೆ. ಸಾಮಾನ್ಯ ಜನ ಬಳಕೆ ಮಾಡುವುದು 70-80 ಯುನಿಟ್ ಅಷ್ಟೇ. ಅದು ಗೊತ್ತಿದ್ದೂ 200 ಯುನಿಟ್ ಉಚಿತ ಎಂದು ಘೋಷಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಒಬ್ಬ ಬಡವ 70 ಯುನಿಟ್ ಬಳಕೆ ಮಾಡುತ್ತಿದ್ದಾನೆ. ನಾಳೆ ಎಲೆಕ್ಟ್ರಿಕ್ ಸ್ಟೌ ತಂದು ಬಳಸಿದಾಗ ಯುನಿಟ್ ಪ್ರಮಾಣ ಜಾಸ್ತಿ ಆಗುತ್ತದೆ. ಇವರು ಮಾಡಿರುವ ಯುನಿಟ್ ದಾಟಿದರೆ ಏನು ಮಾಡಬೇಕು? ಕಂಡೀಷನ್ ಅಪ್ಲೈ ಅಂತಾಗಲಿದೆ ಅಂತ ಅವರು ಸ್ಪಷ್ಟವಾಗಿ ಹೇಳಬೇಕಿತ್ತು. ಇವರು ಗ್ಯಾರಂಟಿಯಲ್ಲಿ ದೋಖಾ ಮಾಡುತ್ತಿದ್ದಾರೆ ಎಂದು ಅರೋಪಿಸಿದರು.
10 ಕೆ.ಜಿ ಅಕ್ಕಿಯಲ್ಲಿ ರಾಗಿ, ಜೋಳ, ಗೋಧಿ ಸೇರಲಿದೆಯಾ?
ಕೊರೋನಾ ಬಳಿಕ ಅನ್ನ ಭಾಗ್ಯ ಯೋಜನೆಯಲ್ಲಿ ಕೇಂದ್ರ ಸರ್ಕಾರ 5 ಕೆ.ಜಿ ಪುಕ್ಕಟೆ ಅಕ್ಕಿ ಕೊಡುತ್ತಿದೆ. ಎಲೆಕ್ಷನ್ ಸಮಯದಲ್ಲಿ ಅನ್ನಭಾಗ್ಯದಲ್ಲಿ 10 ಕೆ.ಜಿ ಅಕ್ಕಿ ಕೊಡುತ್ತೇವೆ ಅಂತ ಹೇಳಿದ್ದರು. 10 ಕೆ.ಜಿ ಅಕ್ಕಿಯಲ್ಲಿ ರಾಗಿ, ಜೋಳ, ಗೋಧಿ ಸೇರಲಿದೆಯಾ? ಅಕ್ಕಿ ಆಂಧ್ರ ಮತ್ತು ಪಂಜಾಬ್‌ನಲ್ಲಿ ಬೆಳೆಯುವುದು, ಅದು ನಮ್ಮ ರೈತರಿಗೆ ಅನುಕೂಲ ಆಗಲ್ಲ. ನಮ್ಮ ರೈತರು ಬೆಳೆಯುವ ರಾಗಿ, ಜೋಳ ಕೊಡುವ ಮೂಲಕ ನಾವು ಸಹಾಯ ಮಾಡುತ್ತಿದ್ದೆವು. ಈಗ ಅವರು 10 ಕೆ.ಜಿ ಅಕ್ಕಿ ಜತೆ 1 ಕೆ.ಜಿ ರಾಗಿ ಅಥವಾ ಜೋಳ ಕೊಡುತ್ತಾರಾ? ಈ ಬಗ್ಗೆ ಸ್ಪಷ್ಟನೆ ಇಲ್ಲ ಎಂದು ಪ್ರಶ್ನಿಸಿದರು.
ಗೃಹ ಲಕ್ಷ್ಮಿ ಯೋಜನೆಯಲ್ಲೂ ಬಹಳ ದೊಡ್ಡ ಮೋಸ
ಗೃಹ ಲಕ್ಷ್ಮಿ ಯೋಜನೆಯಲ್ಲೂ ಬಹಳ ದೊಡ್ಡ ಮೋಸ ಇದೆ. ಈಗ ಖಾತೆ, ಆಧಾರ್ ನಂಬರ್, ಮನೆಯ ಯಜಮಾನಿ ಆನ್ ಲೈನ್ ಅರ್ಜಿ ಸಲ್ಲಿಸಲು ಹೇಳಿದ್ದಾರೆ. ವಿದ್ಯಾವಂತರಿದ್ದರೆ ಮಾತ್ರ ಆನ್‌ಲೈನ್‌ನಲ್ಲಿ ಸಾಧ್ಯ. ಆದರೆ, ಆನ್‌ಲೈನ್‌ನಲ್ಲೇ ಅರ್ಧ ಅರ್ಜಿಗಳನ್ನು ಇವರು ತೆಗೆದು ಹಾಕುತ್ತಾರೆ. ನಾವು ಫಲಾನುಭವಿಗಳನ್ನು ಸಬಲೀಕರಣ ಮಾಡಬೇಕು. ಪಿಡಿಒಗಳ ಮೂಲಕ ಮಾಹಿತಿ ಪಡೆದು ಈ ತಿಂಗಳಿನಿಂದಲೇ ಹಣ ಕೊಡಬಹುದಿತ್ತು. ಜೂನ್, ಜುಲೈ ತಿಂಗಳ ಹಣ ಸೇರಿಸಿ ಆಗಸ್ಟ್‌ನಲ್ಲಿ ಕೊಡುತ್ತಾರೋ ಅಥವಾ ಆಗಸ್ಟ್‌ನಿಂದಲೇ ಕೊಡುತ್ತಾರೋ ಎಂಬ ಸ್ಪಷ್ಟತೆ ಇಲ್ಲ. ಮಾತಿಗೆ ತಪ್ಪಬಾರದು ಅಂದರೆ ಜೂನ್, ಜುಲೈ ಸೇರಿಸಿ ಕೊಡಬೇಕು ಎಂದು ಹೇಳಿದರು.
ಮಹಿಳೆಯರಿಗೆ ಉಚಿತ ಪ್ರಯಾಣ
ರಾಜ್ಯದ ಒಳಗೆ ಮಾತ್ರ ಉಚಿತ ಪ್ರಯಾಣ ಎಂದು ಹೇಳಿದ್ದಾರೆ. ಯಾವ ಯಾವ ಬಸ್ ಅಂತ ಹೇಳಲಿಲ್ಲ. ಒಮ್ಮೆ ರಾಜಹಂಸ , ಎಸಿ ಬಸ್ ಅಂತ ಹೇಳಿದು, ಈಗ ಕೆಂಪು ಬಸ್ ಮಾತ್ರ ಎಂದು ಹೇಳಿದ್ದಾರೆ. ಇವರು ಹೇಳುವುದರಲ್ಲಿ ಎಲ್ಲ ಗೊಂದಲಗಳಿವೆ ಎಂದು ಕಿಡಿಕಾರಿದರು.
ಯುವ ನಿಧಿ ಯೋಜನೆಯಲ್ಲಿ ಡಿಗ್ರಿ ಆದ ಬಳಿಕ ಅನೇಕ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೆ ಹೋಗುತ್ತಾರೆ. ಕನಿಷ್ಠ ಮೂರು ವರ್ಷಗಳಿಂದ ನಿರುದ್ಯೋಗಿಗಳು ಆಗಿರುವವರಿಗೆ ಸಹಾಯಧನ ನೀಡಿದರೆ ಅನುಕೂಲವಾಗಲಿದೆ. ಈ ಬಾರಿ ಪಾಸ್ ಆದವರಿಗೆ ಮಾಡಿದರೆ ಅನುಕೂಲ ಇಲ್ಲ. 2020-23ರ ವರೆಗೂ ಪಾಸ್ ಆದವರಿಗೆ ಇಲ್ಲ. ಸಮಗ್ರವಾಗಿ ಇದನ್ನು ಮರು ಪರಿಶೀಲಿಸಬೇಕು ಎಂದು ತಿಳಿಸಿದರು.
ಆದಾಯದ ಹೆಚ್ಚಳದ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ
ಕೇಂದ್ರ ಯೋಜನೆಗಳಿಗೆ ರಾಜ್ಯದ ಪಾಲು ನಿಲ್ಲಿಸುತ್ತಾರಾ? ಜನರ ಧ್ವನಿಯಾಗಿ ನಾವು ಕೇಳುತ್ತಿದ್ದೇವೆ. ಅನುದಾನ ಲಭ್ಯತೆ ಬಗ್ಗೆ ಮಾಹಿತಿ ಜನರಿಗೆ ಕೊಡಬೇಕು. ಆದಾಯದಲ್ಲಿ ಬದಲಾವಣೆ ತರದಿದ್ದರೆ ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ. ಯಾವ್ಯಾವ ಯೋಜನೆಗೆ ಎಷ್ಟು ವೆಚ್ಚ ಆಗಲಿದೆ. ಯಾವ ಕಾಮಗಾರಿ ನಿಲ್ಲಿಸುತ್ತೀರಾ?, ಎಸ್‌ಇಪಿ, ಟಿಎಸ್‌ಪಿ ಯೋಜನೆ ಕಾಮಗಾರಿ ಸ್ಥಗಿತ ಮಾಡುತ್ತೀರಾ? ಕೇಂದ್ರ ಯೋಜನೆ ಪಾಲುದಾರಿಕೆ ಇರಲಿದೆ. ಅದನ್ನು ಒದಗಿಸುತ್ತೀರಾ, ಇಲ್ಲವಾ? ರಸ್ತೆ, ರೈಲ್ವೇ ಯೋಜನೆ, ಯಾವ ಯೋಜನೆ ಸ್ಥಗಿತ ಮಾಡ್ತೀರಾ? ಜನತೆಗೆ ಕೇಳುವ ಅಧಿಕಾರ ಇದೆ. ಜನರ ಧ್ವನಿಯಾಗಿ ಹಾಗೂ ನೇರವಾಗಿ ನಾವು ಕೇಳುತ್ತೇವೆ ಎಂದು ತಿಳಿಸಿದರು.
ನಾವು ಕಳೆದ ಬಜೆಟ್‌ನಲ್ಲಿ ರೆವಿನ್ಯೂ ಸರ್ ಪ್ಲಸ್ ಬಜೆಟ್ ಮಂಡನೆ ಮಾಡಿದ್ದೆವು. ರಾಜ್ಯದಲ್ಲಿ ಈಗಾಗಲೇ ಹೆಚ್ಚು ಟ್ಯಾಕ್ಸ್ ಸಂಗ್ರಹ ಮಾಡುತ್ತಿದ್ದೇವೆ. ಇನ್ನು ಹೆಚ್ಚು ಟ್ಯಾಕ್ಸ್ ಸಂಗ್ರಹ ಮಾಡಲು ಸಾಧ್ಯವಿಲ್ಲ. ಇವರು ಹೇಗೆ ನಿಭಾಯಿಸುತ್ತಾರೋ ಗೊತ್ತಿಲ್ಲ. ಕೋವಿಡ್ ಬಳಿಕ ಆರ್ಥಿಕ ಸ್ಥಿತಿ ಸುಧಾರಣೆ ಮಾಡಿದ್ದೆವು. ಸಾಲ ಕೂಡ ಕಡಿಮೆ ತೆಗೆದುಕೊಂಡಿದ್ದೇವೆ. ಈಗ 2.6 ವಿತ್ತೀಯ ಕೊರತೆ ಇದೆ. ಇವರು ಸಾಲ ಹೇಗೆ ತೆಗೆದುಕೊಳ್ಳುತ್ತಾರೋ ನೋಡಬೇಕು. ತೆರಿಗೆದಾರರಿಗೂ ಹಣ ಹೇಗೆ ಬಳಕೆ ಆಗುತ್ತಿದೆ ಎಂಬುವುದು ಗೊತ್ತಾಗಬೇಕು ಎಂದು ಹೇಳಿದರು.
ರಾಜ್ಯವನ್ನು ಆರ್ಥಿಕ ಅಧೋಗತಿಗೆ ತೆಗೆದುಕೊಂಡು ಹೋಗಬಾರದು. ಆದಾಯದ ಸ್ಥೂಲ ಚಿತ್ರಣವನ್ನು ಕೊಡಬಹುದಿತ್ತು. ಇವರು ಹೇಳುವುದೊಂದು, ಮಾಡುವುದೊಂದು ಮಾಡಿದ್ದಾರೆ. ಏನೇನು ಕಡಿತಗೊಳಿಸುತ್ತಾರೋ ನೋಡೋಣ. ರೈತರಿಗೆ ಕೊಡುವುದು ನಿಲ್ಲಿಸಿದರೆ ಸಂಕಷ್ಟ ಆಗುತ್ತದೆ. ಎಸ್‌ಇಪಿ, ಟಿಎಸ್‌ಪಿ ಹಣದಲ್ಲಿ ಕಡಿತ ಮಾಡಲಿಕ್ಕಿಲ್ಲ, ಅದು ಕೊಡಲೇಬೇಕಾಗುತ್ತದೆ. ಉಚಿತ ಜಾರಿ ಮೂಲಕ ತಮ್ಮ ಮಾತು ಉಳಿಸುವ ಅರೆ ಬರೆ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಎಲ್ಲರನ್ನೂ ಯಾಮಾರಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.