ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಿಂದಿ ‘ಬಿಗ್ ಬಾಸ್’ ಮನೆಗೆ ಕತ್ತೆ ಕೂಡ ಎಂಟ್ರಿ ಪಡೆದುಕೊಂಡಿದ್ದು,ಅದನ್ನು ಕೂಡ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಹೀಗಾಗಿ ಇದಕ್ಕೆ ಪ್ರಾಣಿಗಳ ಹಕ್ಕುಗಳ ರಕ್ಷಣಾ ವೇದಿಕೆ ‘ಪೆಟಾ’ ಅಪಸ್ವರ ತೆಗೆದಿದೆ. ಈ ರಿಯಾಲಿಟಿ ಶೋನಲ್ಲಿ ಪ್ರಾಣಿಗಳ ಬಳಕೆ ಆಗಬಾರದು ಎಂದು ಹೇಳಿದೆ.
ಈ ಸಂಬಂಧ ಪೆಟಾ ಪತ್ರ ಬರೆದಿದ್ದು, ‘ಪ್ರಾಣಿಗಳನ್ನು ಬಿಗ್ ಬಾಸ್ನಿಂದ ಹೊರಕ್ಕೆ ಇಡಿ’ ಎಂದು ಪತ್ರದಲ್ಲಿ ಕೋರಲಾಗಿದೆ.
‘ಬಿಗ್ ಬಾಸ್ ಮನೆಯಲ್ಲಿ ಕತ್ತೆಯನ್ನು ಇಟ್ಟಿರುವ ಬಗ್ಗೆ ಸಾರ್ವಜನಿಕರಿಂದ ನಮಗೆ ದೂರುಗಳು ಬರುತ್ತಿವೆ. ಜನರ ಕಾಳಜಿ ಮಾನ್ಯವಾಗಿರುತ್ತವೆ ಮತ್ತು ನಿರ್ಲಕ್ಷಿಸಲು ಸಾಧ್ಯವಿಲ್ಲ’ ಎಂದು ಪೆಟಾ ಹೇಳಿದೆ.
‘ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿ, ಬಿಗ್ ಬಾಸ್‌ನ ನಿರೂಪಕರಾಗಿ ನೀವು (ಸಲ್ಮಾನ್ ಖಾನ್) ಮಾದರಿಯಾಗುವ ತಾಕತ್ತನ್ನು ಹೊಂದಿದ್ದೀರಿ. ಪ್ರಾಣಿಗಳನ್ನು ಮನರಂಜನೆಗಾಗಿ ಬಳಸದಂತೆ ವಾಹಿನಿಯವರಿಗೆ ನೀವು ಒತ್ತಡ ಹೇರಬೇಕು. ಅದಕ್ಕೆ ನೀವು ಪ್ರಭಾವವನ್ನು ಬಳಸಬೇಕು’ ಎಂದು ಪೆಟಾ ಮನವಿ ಮಾಡಿಕೊಂಡಿದೆ.
ಈ ಕತ್ತೆಯ ಹೆಸರು ಮ್ಯಾಕ್ಸ್. ಇದನ್ನು ವಕೀಲ ಗುಣರತ್ನ ಅವರು ದೊಡ್ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಇದನ್ನು ಪೆಟಾಗೆ ಹಸ್ತಾಂತರಿಸಬೇಕು ಎಂದು ಕೋರಲಾಗಿದೆ. ‘ಕತ್ತೆಗಳು ಭಯ ಬೀಳುತ್ತವೆ. ಬೆಳಕು, ಗದ್ದಲದಿಂದ ಅವು ತೊಂದರೆಗೆ ಒಳಗಾಗುತ್ತವೆ. ಹೀಗಾಗಿ, ಅದನ್ನು ಶೋನಿಂದ ದೂರ ಇಡಿ’ ಎಂದು ಕೋರಲಾಗಿದೆ.