ಹೊಸದಿಗಂತ ವರದಿ,ಚಿತ್ರದುರ್ಗ :
ನನ್ನ ಮಗನನ್ನು ಕ್ರೂರವಾಗಿ ಕೊಂದಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್‌ನವರಿಗೆ ಉಗ್ರ ಶಿಕ್ಷೆಯಾಗಬೇಕು. ಸೆಲೆಬ್ರಿಟಿ ಎಂಬ ಕಾರಣಕ್ಕೆ ಯಾವುದೇ ಮುಲಾಜು ನೋಡಬಾರದು ಎಂದು ನಟ ದರ್ಶನ್ ಮತ್ತವರ ಗ್ಯಾಂಗ್‌ನಿಂದ ಹತ್ಯೆಗೀಡಾಗಿರುವ ರೇಣುಕಾಸ್ವಾಮಿ ಅವರ ತಾಯಿ ರತ್ನಪ್ರಭ ಆಕ್ರೋಶ ಹೊರಹಾಕಿದರು.
ಚಿತ್ರದುರ್ಗ ನಗರದ ವೆಂಕಟೇಶ್ವರಸ್ವಾಮಿ ಬಡಾವಣೆಯ ತಮ್ಮ ನಿವಾಸದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮಗ ತಾನಾಯಿತು. ತನ್ನ ಕೆಲಸವಾಯಿತು ಎಂದು ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿದ್ದ. ಅವನು ಏನೋ ಮೆಸೇಜ್ ಹಾಕಿದ ಎಂಬ ಒಂದೇ ಕಾರಣಕ್ಕೆ ಬೆಂಗಳೂರಿಗೆ ಕರೆದೊಯ್ದು ಅಮಾನುಷವಾಗಿ ಕೊಲೆ ಮಾಡಲಾಗಿದೆ. ನನ್ನ ಮಗನ ಸಾವಿಗೆ ಕಾರಣರಾದ ಪಾಪಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಕಿಡಿಕಾರಿದರು.
ನನ್ನ ಮಗ ಏನಾದರೂ ತಪ್ಪು ಮಾಡಿದ್ದಲ್ಲಿ ಕಾನೂನಿಗೆ ಒಪ್ಪಿಸಬೇಕಿತ್ತು. ನಮಗಾದರೂ ತಿಳಿಸಿದ್ದರೆ ನಮ್ಮ ಮಗನಿಗೆ ಬುದ್ದಿ ಹೇಳುತ್ತಿದ್ದೆವು. ಆದರೆ ಅವನನ್ನು ಕರೆದೊಯ್ದು ಹೊಡೆದು ಸಾಯಿಸಲು ಇವರಿಗೇನು ಹಕ್ಕಿದೆ. ಮುಖ ಮೂತಿ ನೋಡದೆ ಮನಸ್ಸಿಗೆ ಬಂದಂತೆ ಹೊಡೆದಿದ್ದಾರೆ. ಮೈಮೇಲೆ ಸುಟ್ಟ ಗಾಯಗಳಾಗಿವೆ. ಇದರಿಂದ ನಮಗೆ ನಮ್ಮ ಮಗನ ಗುರುತೇ ಸಿಗಲಿಲ್ಲ. ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಲಾಗಿದೆ. ಇಂಥ ಕಟುಕರಿಗೆ ತಕ್ಕಶಾಸ್ತಿಯಾಗಬೇಕು ಎಂದು ಮರುಗಿದರು.
ಇದ್ದವನೊಬ್ಬ ಮಗ, ನಮ್ಮ ಮುಪ್ಪಿನ ಕಾಲದಲ್ಲಿ ನಮಗೆ ಆಸರೆಯಾಗಬೇಕಿದ್ದ ಮಗನನ್ನು ಬೀದಿ ಹೆಣವನ್ನಾಗಿ ಮಾಡಿದ್ದಾರೆ. ಈಗ ನಮಗ್ಯಾರು ದಿಕ್ಕು. ನಮಗೆ, ನಮ್ಮ ಮಗನಿಗೆ ಬಂದ ಸ್ಥಿತಿ ಯಾರಿಗೂ ಬರುವುದು ಬೇಡ. ನಮ್ಮನ್ನು ಈ ಸ್ಥಿತಿಗೆ ತಂದ ರಾಕ್ಷಸರಿಗೆ ಕಾನೂನು ಕಠಿಣ ಶಿಕ್ಷೆ ನೀಡಬೇಕು. ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕೊಲೆಗೀಡಾದ ರೇಣುಕಾಸ್ವಾಮಿ ಅವರ ಪತ್ನಿ ಸಹನ ಮಾತನಾಡಿ, ಕಳೆದ ಒಂದು ವರ್ಷದ ಹಿಂದೆ ನಮ್ಮ ಮದುವೆಯಾಗಿತ್ತು. ಇದೇ ತಿಂಗಳ ೨೮ ರಂದು ನಮ್ಮ ವೆಡ್ಡಿಂಗ್ ಆನಿವರ್ಸರಿ ದಿನ. ನಾನೀಗ ಐದು ತಿಂಗಳ ಗರ್ಭಿಣಿ. ಈಗ ನನಗೆ, ನನ್ನ ಮಗುವಿಗೆ ಯಾರು ದಿಕ್ಕು. ಮಗು ಹುಟ್ಟಿ ಬೆಳೆದ ಮೇಲೆ ತಂದೆಯ ಬಗ್ಗೆ ಕೇಳಿದರೆ ನಾನೇನು ಹೇಳಲಿ ಎಂದು ಕಣ್ಣೀರಾದರು.
ಪವಿತ್ರಾಗೌಡ ಕೂಡ ನನ್ನಂತೆ ಒಂದು ಹೆಣ್ಣು. ಅವಳಿಂದಾಗಿ ನನ್ನ ಪತಿಯ ಹತ್ಯೆಯಾಗಿದೆ. ಅವಳಿಗೆ ಮತ್ತೊಬ್ಬ ಹೆಣ್ಣಿನ ನೋವು ಅರ್ಥವಾಗುವುದಿಲ್ಲವೇ. ಕೇವಲ ಒಂದು ಮೆಸೇಜ್ ಮಾಡಿದ್ದಕ್ಕೆ ಜೀವ ತೆಗೆಯುವ ಹಂತಕ್ಕೆ ಹೋಗಿದ್ದಾರೆ. ಬದುಕಿನಲ್ಲಿ ಜೊತೆಯಾಗಿ ಬದುಕಬೇಕಿದ್ದ ನನ್ನ ಗಂಡನನ್ನು ಕಿತ್ತುಕೊಂಡಿದ್ದಾರೆ. ಅವರಿಗೆ ಉಗ್ರ ಶಿಕ್ಷೆ ನೀಡಬೇಕು. ಇನ್ನು ಮುಂದೆ ಬೇರೆ ಯಾರಿಗೂ ಹೀಗೆ ಮಾಡಬಾರದು ಎಂದು ಆಕ್ರೋಶ ಹೊರಹಾಕಿದರು.