ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಉಚಿತಗಳನ್ನು ಘೋಷಿಸಿ ಜಾರಿ ಮಾಡಲಾಗದೇ ಮೋಸ ಮಾಡಿದ ಕಾಂಗ್ರೆಸ್ ನ ಪೊಳ್ಳು ಗ್ಯಾರಂಟಿಗಳಿಗೆ ತೆಲಂಗಾಣದ ಜನತೆ ಮರುಳಾಗಬಾರದು ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಬಂದಿರುವ ಅವರು ಹೈದರಾಬಾದ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ ನೀಡಿದ 5 ಭರವಸೆಗಳು ಕರ್ನಾಟಕದಲ್ಲಿ ಜಾರಿಯಾಗಿಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ತೆಲಂಗಾಣದ ಜನರನ್ನೂ ಆ ಪಕ್ಷ ಇದೇ ರೀತಿಯ ಮೋಸದ ಜಾಲಕ್ಕೆ ಬೀಳಿಸಲಿದೆ ಎಂದು ಎಚ್ಚರಿಸಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕರ್ನಾಟಕದ ಜನರನ್ನು ವಂಚಿಸುತ್ತಿದೆ. ರಾಜ್ಯ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ. ಸುಳ್ಳು ಭರವಸೆ ನೀಡಿ ಕರ್ನಾಟಕದ ಜನತೆಗೆ ಕಾಂಗ್ರೆಸ್ ಮೋಸ ಮಾಡಿದೆ. ತೆಲಂಗಾಣದಲ್ಲೂ ಹೊಸ ನಾಟಕ ಆರಂಭಿಸಿದೆ. ತೆಲಂಗಾಣ ಜನತೆ ನಂಬಿ ಮೋಸ ಹೋಗಬೇಡಿ ಎಂದು ಮನವಿ ಮಾಡಿದರು.