March 5, 2026
Thursday, March 5, 2026
spot_img

2 ಸಾವಿರ ಮರಗಳ ಮಾರಣಹೋಮ ಬೇಡ: ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಕ್ಕೆ ರೈತ ಸಂಘಟನೆಗಳ ಪಟ್ಟು

ಹೊಸದಿಗಂತ ಚಿತ್ರದುರ್ಗ:

ಜಿಲ್ಲಾಧಿಕಾರಿಗಳ ನೂತನ ಕಚೇರಿ ಸಂಕೀರ್ಣ ನಿರ್ಮಾಣಕ್ಕಾಗಿ ತೋಟಗಾರಿಕೆ ಇಲಾಖೆ ಹಾಗೂ ಹಾಪ್‌ಕಾಮ್ಸ್‌ನ ಜಾಗವನ್ನು ಬಳಸಿಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ಈಗ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಹಾಪ್‌ಕಾಮ್ಸ್‌ನ ರಾಜ್ಯ ಪ್ರತಿನಿಧಿ ಎಸ್.ಎಂ.ಎಲ್. ತಿಪ್ಪೇಸ್ವಾಮಿ, “ತೋಟಗಾರಿಕೆ ಇಲಾಖೆಯ 6 ಎಕರೆ 10 ಗುಂಟೆ ಹಾಗೂ ಹಾಪ್‌ಕಾಮ್ಸ್‌ನ 20 ಗುಂಟೆ ಜಾಗವನ್ನು ಕಟ್ಟಡಕ್ಕಾಗಿ ಸರ್ಕಾರ ವಶಪಡಿಸಿಕೊಂಡಿದೆ. ಇಲ್ಲಿ ಸುಮಾರು 2,156 ವೈವಿಧ್ಯಮಯ ಗಿಡ-ಮರಗಳಿವೆ. ಒಂದು ವೇಳೆ ಕಚೇರಿ ನಿರ್ಮಾಣವಾದರೆ ಇಷ್ಟೊಂದು ಬೃಹತ್ ಸಂಖ್ಯೆಯ ಮರಗಳನ್ನು ನಾಶಪಡಿಸಬೇಕಾಗುತ್ತದೆ, ಇದು ಪರಿಸರಕ್ಕೆ ತುಂಬಲಾರದ ನಷ್ಟ,” ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಕುಂಚಿಗನಹಾಳ್ ಬಳಿ ಅರ್ಧಕ್ಕೆ ನಿಂತಿರುವ ಡಿಸಿ ಕಚೇರಿ ಕಾಮಗಾರಿಯನ್ನು ಪೂರ್ಣಗೊಳಿಸಲಿ. ಅಥವಾ ಶಿಲ್ಪಭವನ ಮತ್ತು ಪೊಲೀಸ್ ಕವಾಯತು ಮೈದಾನದ ಜಾಗವನ್ನು ಬಳಸಿಕೊಳ್ಳಲಿ. ಅದನ್ನು ಬಿಟ್ಟು ರೈತರಿಗೆ ಬೀಜ, ಗೊಬ್ಬರ ವಿತರಿಸುವ ಹಾಪ್‌ಕಾಮ್ಸ್ ಕಟ್ಟಡವನ್ನು ಕೆಡವುವುದು ಸರಿಯಲ್ಲ ಎಂದು ಕಿಡಿಕಾರಿದರು.

‘ಟಾರ್ಗೆಟ್ ಟೆನ್ ಥೌಸೆಂಡ್’ ಸಂಘಟನೆಯ ಸಿದ್ದರಾಜು ಮಾತನಾಡಿ, “ಬಯಲುಸೀಮೆಯಲ್ಲಿ ಒಂದು ಗಿಡ ಬೆಳೆಸುವುದು ಎಷ್ಟು ಕಷ್ಟ ಎಂಬುದು ನಮಗೆ ಗೊತ್ತು. 2015ರಿಂದ ನಾವು 40 ಸಾವಿರ ಗಿಡಗಳನ್ನು ಬೆಳೆಸಿದ್ದೇವೆ. ಈಗ ಇರುವ ಹಸಿರನ್ನು ನಾಶ ಮಾಡಿದರೆ ಉಸಿರಾಟದ ಸಮಸ್ಯೆ ಎದುರಾಗಲಿದೆ,” ಎಂದರು. ಅಲ್ಲದೆ, ಕುಂಚಿಗನಹಾಳ್ ಬಳಿ ಕಚೇರಿ ನಿರ್ಮಿಸಿದರೆ ನಗರದ ವಿಸ್ತರಣೆ ಮತ್ತು ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂಬ ಸಲಹೆ ನೀಡಿದರು.

ಒಂದು ವೇಳೆ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ರೈತರು ಮತ್ತು ಪರಿಸರ ಪ್ರೇಮಿಗಳ ಒಕ್ಕೂಟದಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಪ್ಪೇಸ್ವಾಮಿ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಶಂಕರಮೂರ್ತಿ, ಉಪಾಧ್ಯಕ್ಷ ಅರುಣ್, ನಿರ್ದೇಶಕರಾದ ಕೆಂಚವೀರಪ್ಪ, ಚಂದ್ರಶೇಖರ್ ಹಾಗೂ ರೈತ ಮುಖಂಡರಾದ ಸೂರಪ್ಪ, ಸತ್ಯನಾರಾಯಣರೆಡ್ಡಿ, ಮುರಳಿ, ನಾಗರಾಜ್‌ ಬೇದ್ರೆ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !