ಹೊಸ ದಿಗಂತ ವರದಿ, ದಾವಣಗೆರೆ:
ಪಕ್ಷದ ರಾಷ್ಟ್ರೀಯ ನಾಯಕರು ಬಿ.ವೈ.ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಈ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ವಿರೋಧ ಮಾಡುವುದಾಗಲೀ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಗುರವಾಗಿ ಮಾತನಾಡುವುದಾಗಲೀ ಸರಿಯಲ್ಲ. ತಮ್ಮ ದೂರು, ಸಮಸ್ಯೆಗಳು ಇದ್ದರೆ ಪಕ್ಷದ ಕೇಂದ್ರ ನಾಯಕರ ಜೊತೆಗೆ ಮಾತನಾಡಬೇಕೆ ಹೊರತು ಬಹಿರಂಗ ಹೇಳಿಕೆ ನೀಡುವುದು ಸಲ್ಲದು. ಪಕ್ಷದ ವರಿಷ್ಟರಾದ ಅಮಿತ್ ಶಾ, ರಾಜನಾಥ್ ಸಿಂಗ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಳಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಲಿ. ತಪ್ಪಾಗಿದ್ದರೆ ವರಿಷ್ಟರು ಕ್ರಮ ಕೈಗೊಳ್ಳುತ್ತಾರೆ ಎಂದರು.
ಕಾಂಗ್ರೆಸ್ ಸರ್ಕಾರದ ನೂನ್ಯತೆ ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಯುಪಿಎ ಆಳ್ವಿಕೆಯಲ್ಲಿ ಶೇ.12ರಷ್ಟು ವಿದ್ಯುತ್ ಕೊರತೆ ಇತ್ತು. ಈಗ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಬೇರೆ ದೇಶಗಳಿಗೆ ಪೂರೈಸುವಷ್ಟು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. ಮುದ್ರಾ, ಸ್ವನಿಧಿ ಯೋಜನೆ, ಡಿಬಿಟಿ ಕೇಂದ್ರ ಸರ್ಕಾರದ ಸಾಧನೆಗಳಾಗಿವೆ. ಮುಂದಿನ 10 ವರ್ಷದಲ್ಲಿ ಭಾರತ ನಂಬರ್ ಒನ್ ರಾಷ್ಟ್ರವಾಗಲಿದೆ. ಜನರಿಗೆ ಟೋಪಿ ಹಾಕುವುದರಲ್ಲಿ, ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿನವರು ನಂಬರ್ ಒನ್. ಸುಳ್ಳು ಹೇಳುವ ಸ್ಪರ್ಧೆಯಲ್ಲಿ ಕಾಂಗ್ರೆಸ್ ಫಸ್ಟ್ ಇದೆ ಎಂದು ಅವರು ಆರೋಪಿಸಿದರು.
ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ದಾಂಧಲೆ ಮಾಡಿದವರ ಮೇಲಿನ ಪ್ರಕರಣ ಹಿಂಪಡೆಯುವ ಕಾಂಗ್ರೆಸ್ ಸರ್ಕಾರವು ಕನ್ನಡಕ್ಕಾಗಿ ಧ್ವನಿ ಎತ್ತಿದ ಹೋರಾಟಗಾರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಸರಿಯಲ್ಲ. ಕನ್ನಡಪರ ಹೋರಾಟ ನ್ಯಾಯಯುತವಾಗಿದೆ. ಆದರೂ ಹೋರಾಟಗಾರರ ಮೇಲೆ ಸಾಕಷ್ಟು ಸೆಕ್ಷನ್‌ನಡಿ ಪ್ರಕರಣ ದಾಖಲಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಕನ್ನಡ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಕನ್ನಡ ಭಾಷೆಯನ್ನು ನಾಮಫಲಕದಲ್ಲಿ ಬರೆಸುವಂತೆ ಹೋರಾಟ ಮಾಡುವುದೂ ತಪ್ಪೇ? ತಕ್ಷಣವೇ ಆ ಎಲ್ಲಾ ಬಂಧಿತ ಕನ್ನಡಪರ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.