ಮಳೆಗಾಲ ತಂಪಿನ ಅನುಭವವನ್ನು ನೀಡಿದರೂ, ಇದೇ ಸಮಯದಲ್ಲಿ ಸೋಂಕು ಹರಡುವ ಅಪಾಯವೂ ಹೆಚ್ಚಿರುತ್ತದೆ. ಮಳೆಯ ಆರ್ದ್ರತೆಯಿಂದಾಗಿ ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ ಮತ್ತು ಹೊಟ್ಟೆ ಹಾಗೂ ಜೀರ್ಣಕ್ರಿಯೆಯ ಸಮಸ್ಯೆಗಳು ಸಾಮಾನ್ಯವಾಗುತ್ತವೆ. ಇಂತಹ ಸಂದರ್ಭದಲ್ಲಿ ಏನು ತಿನ್ನಬೇಕು ಎಂಬುದಷ್ಟೇ ಅಲ್ಲ, ಯಾವ ಆಹಾರಗಳನ್ನು ತಿನ್ನಬಾರದು ಎಂಬುದೂ ಬಹಳ ಮುಖ್ಯ. ತಪ್ಪು ಆಹಾರ ಸೇವನೆಯಿಂದ ಅಜೀರ್ಣ, ಆಹಾರ ವಿಷಬಾಧೆ, ಸೋಂಕು ಮುಂತಾದ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಆಹಾರಗಳನ್ನು ಸಂಪೂರ್ಣವಾಗಿ ತಪ್ಪಿಸುವುದು ಉತ್ತಮ.
ಸೊಪ್ಪು ಮತ್ತು ಎಲೆಯುಳ್ಳ ತರಕಾರಿಗಳು
ಪಾಲಕ್, ಎಲೆಕೋಸು, ಲೆಟಿಸ್ ಮುಂತಾದ ಎಲೆ ತರಕಾರಿಗಳಲ್ಲಿ ಮಣ್ಣು ಹಾಗೂ ಕೀಟಗಳು ಹೆಚ್ಚು ಅಂಟಿಕೊಂಡಿರುತ್ತವೆ. ಮಳೆಗಾಲದಲ್ಲಿ ಇವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಕಷ್ಟವಾಗುತ್ತದೆ. ಸರಿಯಾಗಿ ತೊಳೆಯದೆ ತಿಂದರೆ ಹೊಟ್ಟೆ ಸಂಬಂಧಿ ಸಮಸ್ಯೆಗಳು ಮತ್ತು ಅಜೀರ್ಣ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ.
ರಸ್ತೆ ಬದಿಯಲ್ಲಿ ಸಿಗುವ ಕರಿದ ತಿಂಡಿಗಳು
ಮಳೆಗಾಲದಲ್ಲಿ ಪಕೋಡಾ, ಸಮೋಸಾ ತಿನ್ನುವ ಬಯಕೆ ಹೆಚ್ಚಾದರೂ ರಸ್ತೆ ಬದಿಯಲ್ಲಿ ತಿನ್ನುವುದು ಅಪಾಯಕಾರಿ. ಹಳೆಯ ಎಣ್ಣೆ ಮರುಬಳಕೆ, ನೈರ್ಮಲ್ಯದ ಕೊರತೆ ಹಾಗೂ ತೇವಾಂಶದಿಂದ ಆಹಾರ ಸುಲಭವಾಗಿ ಹಾಳಾಗುತ್ತದೆ.
ಸಮುದ್ರ ಆಹಾರಗಳು
ಮಳೆಗಾಲದಲ್ಲಿ ಮೀನು, ಸೀಗಡಿ ಮುಂತಾದ ಸಮುದ್ರ ಆಹಾರಗಳನ್ನು ತಪ್ಪಿಸಬೇಕು. ಈ ಸಮಯದಲ್ಲಿ ಸಮುದ್ರ ಜೀವಿಗಳ ಸಂತಾನೋತ್ಪತ್ತಿ ನಡೆಯುವುದರಿಂದ ಅವುಗಳಲ್ಲಿ ವಿಷಕಾರಿ ಅಂಶಗಳು ಹೆಚ್ಚಿರುತ್ತವೆ. ಇದರಿಂದ ಫುಡ್ ಪಾಯ್ಸನಿಂಗ್ ಸಂಭವಿಸಬಹುದು.
ಕತ್ತರಿಸಿ ಇಟ್ಟ ಹಣ್ಣುಗಳು
ಬೀದಿ ಬದಿಯ ವ್ಯಾಪಾರಿಗಳು ಹಣ್ಣುಗಳನ್ನು ಕತ್ತರಿಸಿ ಮಾರಾಟ ಮಾಡುವುದನ್ನು ಸಾಮಾನ್ಯವಾಗಿ ಕಾಣಬಹುದು. ಆದರೆ ಮಳೆಗಾಲದಲ್ಲಿ ಹೀಗೆ ಕತ್ತರಿಸಿ ಇಡುವ ಹಣ್ಣುಗಳು ತೇವಾಂಶ ಹಿಡಿದುಕೊಂಡು ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತವೆ. ಇವು ಹೊಟ್ಟೆ ನೋವು, ಸೋಂಕು ಹಾಗೂ ಅಜೀರ್ಣಕ್ಕೆ ಕಾರಣವಾಗಬಹುದು.
ಕಾರ್ಬೊನೇಟೆಡ್ ಪಾನೀಯಗಳು
ಮಳೆಗಾಲದಲ್ಲಿ ಜೀರ್ಣಕ್ರಿಯೆ ನಿಧಾನವಾಗಿರುವುದರಿಂದ ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದು ಸೂಕ್ತವಲ್ಲ. ಇವು ಹೊಟ್ಟೆ ಉಬ್ಬರ ಹಾಗೂ ಅಜೀರ್ಣವನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಮೊಸರು ಮತ್ತು ಮಜ್ಜಿಗೆ
ಈ ಕಾಲದಲ್ಲಿ ಹುದುಗಿಸಿದ ಹಾಲಿನ ಉತ್ಪನ್ನಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ನಿಧಾನಗೊಂಡು ಹೊಟ್ಟೆಯುಬ್ಬರ, ಅಜೀರ್ಣ ಹೆಚ್ಚಾಗುತ್ತದೆ. ಆದ್ದರಿಂದ ಮೊಸರು, ಮಜ್ಜಿಗೆ ಸೇವನೆ ತಪ್ಪಿಸಿಕೊಳ್ಳುವುದು ಉತ್ತಮ.
ಮಳೆಗಾಲದಲ್ಲಿ ತಿನ್ನುವ ಆಹಾರದಲ್ಲಿ ಎಚ್ಚರಿಕೆ ವಹಿಸುವುದೇ ಆರೋಗ್ಯ ಕಾಪಾಡಿಕೊಳ್ಳುವ ಮೊದಲ ಹೆಜ್ಜೆ. ಎಲೆ ತರಕಾರಿ, ಕತ್ತರಿಸಿ ಇಟ್ಟ ಹಣ್ಣು, ಸಮುದ್ರ ಆಹಾರ ಹಾಗೂ ಹೊರಗಡೆ ಸಿಗುವ ಕರಿದ ಪದಾರ್ಥಗಳನ್ನು ದೂರವಿಡುವುದು ಸುರಕ್ಷಿತ. ಬದಲಿಗೆ ಮನೆಯಲ್ಲೇ ತಯಾರಿಸಿದ ಬಿಸಿ ಬಿಸಿ ಸೂಪ್, ಶುಂಠಿ, ಅರಿಶಿಣ ಮತ್ತು ಹಣ್ಣುಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿ ದೇಹ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.