ಇತ್ತೀಚೆಗೆ ನಡೆದ ವಿಮಾನ ಪತನದ ಘಟನೆ ಭದ್ರತೆಯ ವಿಷಯವನ್ನು ಮತ್ತೆ ಜೀವಂತ ಮಾಡಿದೆ. ಈ ದುರ್ಘಟನೆ ವಿಮಾನ ಪ್ರಯಾಣದ ಬಗ್ಗೆ ಹೆಚ್ಚು ತಿಳಿದುಕೊಳ್ಳುವಂತೆ ಮಾಡುತ್ತಿದೆ. ವಿಮಾನದಲ್ಲಿ ಏನು ತೆಗೆದುಕೊಂಡು ಹೋಗಬಹುದು, ಏನು ಸಾಧ್ಯವಿಲ್ಲ ಅನ್ನೋ ಅನುಭವ ನಿಮಗೂ ಇರುತ್ತೆ. ಒಂದು ದೊಡ್ಡ ಬ್ಯಾಗ್ ತುಂಬಾ ಸಿದ್ಧಪಡಿಸಿ, ಎಷ್ಟೋ ವಸ್ತುಗಳನ್ನ ಹಾಕಿ ಹೋಗುತ್ತೇವೆ. ಆದರೆ ವಿಮಾನ ನಿಲ್ದಾಣ ತಲುಪಿದ ಮೇಲೆ, “ಇದನ್ನು ಒಳಗೆ ತೆಗೆದುಕೊಂಡು ಹೋಗೋಕೆ ಆಗಲ್ಲ” ಅನ್ನೋ ಮಾತು ಕೇಳಿದ್ರೆ ಛೆ… ಬೇಜಾರಾಗುತ್ತೆ.
ಅದ್ರಲ್ಲೂ ‘ತೆಂಗಿನಕಾಯಿ’ – ಹೌದು, ನಾವು ಪೂಜೆಗೆ ಬಳಸೋ, ದೇವರಿಗೆ ಅರ್ಪಿಸೋ ತೆಂಗಿನಕಾಯಿಯೂ ವಿಮಾನದಲ್ಲಿ ನಿಷೇಧಿತ ಪಟ್ಟಿಯಲ್ಲಿದೆ ಅಂತ ಕೇಳಿದ್ರೆ ಆಶ್ಚರ್ಯವಾಗುತ್ತೆ ಅಲ್ವಾ? ಆದರೆ ಇದು ನಿಜ. ವಿಮಾನದಲ್ಲಿ ಪೂರ್ತಿ ತೆಂಗಿನಕಾಯಿ ತೆಗೆದುಕೊಂಡು ಹೋಗಲು ಅವಕಾಶವಿಲ್ಲ.
ಈ ನಿರ್ಬಂಧದ ಹಿಂದೆ ಸುರಕ್ಷತೆಗೆ ಸಂಬಂಧಿಸಿದ ಕಾರಣಗಳಿವೆ. ತೆಂಗಿನಕಾಯಿ ಒಳಗೆ ದ್ರವ (ನೀರು) ಇರುವುದರಿಂದ, ಗಾಳಿಯಲ್ಲಿ ಹಾರುತ್ತಿರುವಾಗ ಬಾಹ್ಯ ಒತ್ತಡದ ಬದಲಾವಣೆಯಿಂದ ಅದು ಸ್ಫೋಟಿಸಬಹುದೆಂಬ ಆತಂಕವಿದೆ. ವಿಮಾನದಲ್ಲಿ ಇಂತಹ ಅನಿರೀಕ್ಷಿತ ಸ್ಫೋಟಗಳು ಪ್ರಯಾಣಿಕರ ಭದ್ರತೆಯ ಮೇಲೆ ದೊಡ್ಡದಾದ ಅಪಾಯವನ್ನುಂಟುಮಾಡಬಹುದು. ಆದ್ದರಿಂದ ಈ ನಿರ್ಧಾರ.
ಇತ್ತೀಚೆಗಿನ ನಾಗರಿಕ ವಿಮಾನಯಾನ ಸಚಿವಾಲಯದ ಪಟ್ಟಿ ಪ್ರಕಾರ ಕತ್ತರಿ, ಬ್ಲೇಡ್, ಲೈಟರ್, ಸೆಲ್ಲೋ ಟೇಪ್, ತೆಂಗಿನಕಾಯಿ ಮುಂತಾದವನ್ನೂ ತೆಗೆದುಕೊಂಡು ಹೋಗಲು ನಿರ್ಬಂಧವಿದೆ. ಇನ್ನೂ ತೆಂಗಿನಕಾಯಿ ಮಾತ್ರವಲ್ಲದೆ ಮೀನು, ಮಾಂಸ, ಉಪ್ಪಿನಕಾಯಿ, ಘಾಟು ವಾಸನೆ ಬರುವ ಮಸಾಲೆ ಪದಾರ್ಥಗಳನ್ನೂ ನಿಯಮಿತ ರೂಪದಲ್ಲಿ ಮಾತ್ರ ಸಾಗಿಸಬಹುದು.
ಆದರೆ, ತೆಂಗಿನಕಾಯಿ ತೆಗೆದುಕೊಂಡು ಹೋಗಬೇಕಾದ್ರೆ, ನೀರನ್ನು ತೆಗೆದು, ಅದನ್ನು ಚೂರು ಚೂರು ಮಾಡಿ, ಒಣಗಿಸಿ ಪ್ಯಾಕ್ ಮಾಡಿದರೆ ಸಾಧ್ಯವಿರಬಹುದು. ಆದರೆ ಅಂಥ ಪ್ಯಾಕಿಂಗ್ ಕೂಡ ಏರ್ಲೈನ್ ನಿಯಮಗಳಿಗೆ ಅನುಗುಣವಾಗಿರಬೇಕು.
ವಿಮಾನದಲ್ಲಿ ಏನು ತೆಗೆದುಕೊಂಡು ಹೋಗಬಹುದು, ಏನು ಅಲ್ಲ ಅಂತ ಮೊದಲು ಚೆಕ್ ಮಾಡೋದು ಒಳ್ಳೇದು. ಇಲ್ಲದಿದ್ದರೆ, ನಿಲ್ದಾಣದಲ್ಲೆಲ್ಲಾ ನಿಮ್ಮ ವಸ್ತುಗಳು ನಿಮ್ಮ ಕೈತಪ್ಪಬಹುದು.