ತರಕಾರಿ ಮಾರ್ಕೆಟ್‌ ಕಡೆ ತಲೆನೂ ಹಾಕೋ ಹಾಗಿಲ್ಲ, ಗಗನಕ್ಕೇರಿದೆ ಹಣ್ಣು ತರಕಾರಿ ಬೆಲೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ತರಕಾರಿ ಹಾಗೂ ಹಣ್ಣುಗಳ ಬೆಲೆ ಹೆಚ್ಚಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ತರಕಾರಿ ಮತ್ತು ಹಣ್ಣುಗಳ ಬೆಲೆ ಗಗನಕ್ಕೇರಿದೆ. ಇದೇ ಪರಿಸ್ಥಿತಿ ಒಂದು ತಿಂಗಳ ಕಾಲ ಮುಂದುವರಿಯಬಹುದು ಎಂದು ಹೇಳಲಾಗಿದೆ.

ಒಂದು ಕೆಜಿ ಹುರುಳಿಕಾಯಿ 220 ರೂ.ಗೆ ಮಾರಾಟವಾಗುತ್ತಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 250 ರಿಂದ 290 ರೂ. ಆಗಿದೆ. ಅದೇ ರೀತಿ, ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಕೆಜಿಗೆ 280 ರಿಂದ 320 ರೂ. ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕಟ್ಟಿಗೆ 100 ರೂ.ಗೆ ಮಾರಾಟವಾಗುತ್ತಿದೆ. ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಮೆಂತ್ಯ ಸೊಪ್ಪು ಕೆಜಿಗೆ 220 ರೂ.ಗೆ ಮಾರಾಟವಾಗುತ್ತಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕಟ್ಟಿಗೆ 120-150 ರೂ.ಗೆ ಮಾರಾಟವಾಗುತ್ತಿದೆ. ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿ ಕ್ರಮವಾಗಿ ಕೆಜಿಗೆ 195 ಮತ್ತು 338 ರೂ.ಗೆ ಮಾರಾಟವಾಗುತ್ತಿದೆ.

ಈಗ ಬೆಳೆಗಳು ಕೊಯ್ಲಿಗೆ ಸಿದ್ಧವಾಗಿಲ್ಲ. ಬೆಳೆಗಳನ್ನು ಬೆಳೆಯಲು ಒಂದು ತಿಂಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ. ಸದ್ಯ ಇತರ ರಾಜ್ಯಗಳಿಂದ ಪೂರೈಕೆಯೂ ಕಡಿಮೆಯಾಗಿದೆ. ಏಕೆಂದರೆ, ಅಲ್ಲಿ ಕೂಡ ಇದೇ ರೀತಿಯ ಹವಾಮಾನ ಪರಿಸ್ಥಿತಿಗಳು ಚಾಲ್ತಿಯಲ್ಲಿವೆ. ಜತೆಗೆ ರೈತರು ತೋಟಗಾರಿಕಾ ಬೆಳೆಗಳನ್ನು ಬಿಟ್ಟು ಬೇರೆ ಬೆಳೆಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಬೆಳೆ ಕಡಿಮೆಯಾಗಿದೆ. ಸದ್ಯ, ರಾಜ್ಯದಲ್ಲಿ ಒಟ್ಟು 27.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!