ರಾಜಕೀಯ ಲಾಬಿಗೆ ಮಣಿದು ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬೇಡಿ: ಲಹರ್‌ ಸಿಂಗ್‌ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಮಾಜಿ ವಯನಾಡ್ ಸಂಸದ ರಾಹುಲ್‌ ಗಾಂಧಿ ಹಾಗೂ ಕೇರಳ ಸರ್ಕಾರದ ಲಾಬಿಗೆ ಮಣಿದು ಅವಕಾಶ ನೀಡಬಾರದು ಎಂದು ಬಿಜೆಪಿ ಸಂಸದ ಲಹರ್‌ ಸಿಂಗ್‌ ಸಿರೋಯಾ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಲಹರ್ ಸಿಂಗ್, ಯಾವುದೇ ರಾಜಕೀಯ ಒತ್ತಡಗಳು ಬಂದರೂ ಕೂಡ ಕರ್ನಾಟಕ ಸರ್ಕಾರ, ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧವನ್ನು ಎತ್ತಿಹಿಡಿಯಬೇಕು. ಬಂಡೀಪುರವನ್ನು ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಂಡೀಪುರದಲ್ಲಿ 2005 ಮತ್ತು 2007ರ ನಡುವೆ ವಾಹನ ಅಪಘಾತದಿಂದ 286 ವನ್ಯಜೀವಿಗಳು ಮೃತಪಟ್ಟಿವೆ. 2009ರಲ್ಲಿ ಕರ್ನಾಟಕ ಸರ್ಕಾರ ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದು ಅದು ಈಗಲೂ ಮುಂದುವರೆದಿದೆ. ಈ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ ಎಂದರು.

2010 ಮತ್ತು 2018 ರ ನಡುವೆ, ವನ್ಯಜೀವಿಗಳ ಸಾವಿನ ಸಂಖ್ಯೆ 34 ಕ್ಕೆ ಇಳಿದಿತ್ತು. ಅಭಯಾರಣ್ಯದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ರಾತ್ರಿ ವಾಹನ ಸಂಚಾರ ನಿಷೇಧದಿಂದ ವನ್ಯಜೀವಿಗಳಿಗೆ ಹಾನಿಯಾಗುವುದು ತಪ್ಪಿದೆ ಎನ್ನುವುದು ಇದರಿಂದ ಸಾಬೀತಾಗಿದೆ. ಕೇರಳ ಸರಕಾರವು ನಿಷೇಧವನ್ನು ತೆಗೆದುಹಾಕುವಂತೆ ಅರ್ಜಿ ಸಲ್ಲಿಸಿದ ನಂತರ 2019ರಲ್ಲಿ ಸುಪ್ರೀಂ ಕೋರ್ಟ್ ನಿಷೇಧವನ್ನು ಎತ್ತಿ ಹಿಡಿಯಿತು.

ಆದರೆ ದುರದೃಷ್ಟವಶಾತ್, ಇತ್ತೀಚಿಗೆ ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧವನ್ನು ತೆಗೆದುಹಾಕುವ ಪ್ರಯತ್ನ ಆರಂಭವಾಗಿದೆ. ನವೆಂಬರ್ 2024ರಲ್ಲಿ, ನಿರ್ಬಂಧಗಳನ್ನು ಸಡಿಲಗೊಳಿಸುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದು ಆತಂಕ ಉಂಟುಮಾಡಿತ್ತು. ನಿಷೇಧವನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಿ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತ್ರದಿಂದ ಈ ಬೇಡಿಕೆಗೆ ಇನ್ನಷ್ಟು ಉತ್ತೇಜನ ದೊರೆಯಿತು.ಈ ಕ್ರಮಗಳು ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ನಿಷೇಧವನ್ನು ತೆಗೆದುಹಾಕಲು ರಾಜಕೀಯ ಒತ್ತಡಕ್ಕೆ ಮಣಿಯುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದ್ದು, ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೇರಿದಂತೆ ಕಾಂಗ್ರೆಸ್ ನಾಯಕರ ಹೇಳಿಕೆಗಳಿಂದ ಇದು ಇನ್ನಷ್ಟು ಸ್ಪಷ್ಟವಾಗಿದೆ ಎಂದಿದ್ದಾರೆ.

ಇದು ರಾಜ್ಯದ ಪರಿಸರಕ್ಕೆ ಮಾತ್ರವಲ್ಲ, ಕಾಂಗ್ರೆಸ್‌ ನಾಯಕಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ವನ್ಯಜೀವಿ ಸಂರಕ್ಷಣೆ ಮತ್ತು ಜೀವವೈವಿಧ್ಯಕ್ಕೆ ತೋರಿದ್ದ ಬದ್ಧತೆಗೂ ಬಗೆಯುವ ದ್ರೋಹವಾಗಿದೆ. ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣೆಗೆ ಕಾಂಗ್ರೆಸ್‌ ಕುಟುಂಬ ತೋರುವ ಬದ್ಧತೆಯ ಬಗ್ಗೆ ಕಾಂಗ್ರೆಸ್ ನಾಯಕರು ಪುಟಗಟ್ಟಲೆ ಬರೆದುಕೊಂಡಿದ್ದಾರೆ. ಈ ಪರಂಪರೆಯನ್ನು ಈಗ ಏಕೆ ಕೈಬಿಡಲಾಗುತ್ತಿದೆ? ಇದು ಕಾಂಗ್ರೆಸ್‌ನ ಚುನಾವಣಾ ಫಲಿತಾಂಶಗಳನ್ನೂ ಗಮನದಲ್ಲಿಟ್ಟುಕೊಂಡು ನಡೆಯುತ್ತಿರುವ ಪ್ರತಿಫಲನವೇ? ರಾಷ್ಟ್ರೀಯ ಹಿತಾಸಕ್ತಿಗಿಂತ ಚುನಾವಣಾ ಹಿತಾಸಕ್ತಿಯೇ ಹೆಚ್ಚಾಯಿತೇ? ಎಂದು ಪ್ರಶ್ನಿಸಿದರು.

ಇತ್ತೀಚಿನ ಬಜೆಟ್ ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ನಾನು ಪ್ರಯತ್ನಿಸಿದ್ದೆ. ಆದರೆ ವಿರೋಧ ಪಕ್ಷಗಳಿಂದ ಉಂಟಾದ ಗದ್ದಲ ಮತ್ತು ಪದೇ ಪದೇ ಮುಂದೂಡಿಕೆಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಆದ್ದರಿಂದ, ಈ ಮೂಲಕ ಮಾಧ್ಯಮಗಳೊಂದಿಗೆ ಈ ವಿಷಯದ ಬಗ್ಗೆ ನನ್ನ ಅಭಿಪ್ರಾಯಗಳನ್ನು ತಿಳಿಸುತ್ತಿದ್ದೇನೆ ಎಂದರು.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!