January16, 2026
Friday, January 16, 2026
spot_img

ಏನಾಗಿಲ್ಲ ʼಮಾಮೂಲಿ ಶೀತʼ ಅಂತ ಇಗ್ನೋರ್‌ ಮಾಡ್ಬೇಡಿ! ಏನಿದು ಸೀಸನಲ್‌ ಫ್ಲೂ? ರಕ್ಷಣೆ ಹೇಗೆ?

ಹೊಸ ವರ್ಷದ ಜೊತೆ ಹಬ್ಬಗಳು, ಪಾರ್ಟಿಗಳು, ಸಾರ್ವಜನಿಕ ಕಾರ್ಯಕ್ರಮಗಳು ಸಾಲಾಗಿ ಬರುತ್ತವೆ. ಇದರ ಜೊತೆಗೆ ಸೈಲೆಂಟ್‌ ಆಗಿ ‘ಸಾಮಾನ್ಯ ಶೀತ’ ಎಂದು ಕರೆಯಲಾಗುವ ಆರೋಗ್ಯ ಸಮಸ್ಯೆ ಕೂಡ ನಮ್ಮ ಮಧ್ಯೆ ಬಂದಿರುತ್ತದೆ. ಈ ಸಮಯದಲ್ಲಿ ಶೇ 80 ರಷ್ಟು ಹೊರ ರೋಗಿಗಳ ಸೇವೆ ವಿಭಾಗದಲ್ಲಿ ಕೆಮ್ಮಿನ ಶಬ್ದವೇ ತುಂಬಿರುತ್ತದೆ. ಬರುವ ರೋಗಿಗಳಲ್ಲಿ ಸಾಕಷ್ಟು ಜನರು ನಿರಂತರ ಕೆಮ್ಮು, ನಿದ್ರೆ ಮಾಡುವಲ್ಲಿ ಸಮಸ್ಯೆ, ಧ್ವನಿಯಲ್ಲಿ ಬದಲಾವಣೆ ಸಮಸ್ಯೆಯನ್ನು ಹೊಂದಿರುವವರೇ. ಕೆಮ್ಮಿನ ಸಮಸ್ಯೆ ಜೊತೆ ಕಾಡುವ ವಾಂತಿ ಸಮಸ್ಯೆ, ಕೆಲವು ಪ್ರಕರಣಗಳಲ್ಲಿ ತಲೆ ಸುತ್ತು ಕೂಡ ಕಂಡು ಬರುತ್ತವೆ.

ಪ್ರತಿ ವರ್ಷ ಈ ಸಮಯದಲ್ಲಿ ಕಂಡು ಬರುವ ಆರೋಗ್ಯ ಸಮಸ್ಯೆ ಲಕ್ಷಣಗಳ ಬಗ್ಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್‌ ಪಲ್ಮೋನಾಲಜಿಸ್ಟ್‌ ಡಾ. ಉದಯ್‌ ಸುರೇಶ್‌ಕುಮಾರ್‌ ಮಾಹಿತಿ ನೀಡಿದ್ದಾರೆ..

ಸಾಮಾನ್ಯವಾಗಿ ಇಂತಹ ಲಕ್ಷಣಗಳು ಹೆಚ್ಚಾಗಿ ಕಂಡುಬಂದಲ್ಲಿ ಇದರ ಹಿಂದಿನ ಕಾರಣ ಇನ್ಫ್ಲುಯೆನ್ಜಾ ಸೋಂಕು ಹಾಗೂ ಪದೇ ಪದೇ ಬದಲಾಗುವ ಹವಾಮಾನ. ನಮಗೆಲ್ಲ ಗೊತ್ತಿರುವ ಹಾಗೇ ಇತ್ತೀಚೆಗೆ ವಾತಾವರಣದ ತಾಪಮಾನ ಹಾಗೂ ಕಾಲದಲ್ಲಿ ತೀವ್ರ ಬದಲಾವಣೆ ಕಂಡುಬರುತ್ತಿದೆ. ಈ ಅನಿರೀಕ್ಷಿತ ಹವಾಮಾನ ಬದಲಾವಣೆ ಮತ್ತು ಶಾಖದ ವಾತಾವರಣದಿಂದ ತಂಪು ವಾತಾವರಣಕ್ಕೆ ಪದೇ ಪದೇ ಬದಲಾಗುವುದರಿಂದ ಇಂತಹ ಸೋಂಕುಗಳನ್ನು ಹೆಚ್ಚಿಸುತ್ತದೆ. (ಈ ರೀತಿಯ ಸೋಂಕುಗಳು ತಂಪಾದ ಮತ್ತು ಒಣ ಹವೆಯಲ್ಲಿ ದೀರ್ಘ ಕಾಲದ ವರೆಗೆ ಜೀವಿಸುತ್ತವೆ). ಒಣ ಹವೆ ವಾತಾವರಣವು ಮೂಗಿನಲ್ಲಿ ಅತಿ ಸಣ್ಣದಾದ ಒಡಕುಗಳನ್ನು ಮೂಡಿಸುತ್ತವೆ, ಇವು ಈ ಸೋಂಕುಗಳು ದೇಹದೊಳಗೆ ಪ್ರವೇಶಿಸುವ ಮಾರ್ಗವಾಗಿ ಕೆಲಸ ಮಾಡುತ್ತವೆ, ಇದರಿಂದ ಮ್ಯೂಕಸ್‌ (ಕಫ) ತೆರವುಗೊಳಿಸಲು ಅಡ್ಡಿಯಾಗುತ್ತದೆ.

ಹವಾಮಾನ ಬದಲಾವಣೆಯು ಗಾಳಿಯ ಗುಣಮಟ್ಟದ ಮೇಲೂ ಪರಿಣಾಮ ಬೀರುವುದರಿಂದ , ಹೆಚ್ಚಿನ ಮಾಲಿನ್ಯವು ಸ್ಮಾಗ್‌ (ಹೊಗೆ ಮಂಜು) ಮತ್ತಷ್ಟು ಸಮಸ್ಯೆಯನ್ನು ಹೆಚ್ಚಿಸುತ್ತವೆ. ಇನ್ನು ಹೆಚ್ಚಿನ ಸಮಯ ಮನೆಯೊಳಗೆ ಸಮಯ ಕಳೆಯುವುದು, ಸೂಕ್ತವಾದ ಗಾಳಿ ಚಲನೆ ಸಾಧ್ಯವಾಗದಂತಹ ಜನ ಸಂದಣಿ ಪ್ರದೇಶದಲ್ಲಿ ಇರುವುದರಿಂದ ಈ ಸೋಂಕು ಬೇಗ ಹರುಡುತ್ತವೆ. ಇದೇ ಕಾರಣಕ್ಕೆ ಫ್ಲೂ ವೈರಸ್‌ಗಳ ಸಮಸ್ಯೆ ಮಳೆಗಾಲದಲ್ಲಿ ಅಧಿಕವಾಗುವುದನ್ನು ಕಾಣಬಹುದು.

ಈ ಸೋಂಕು ಸಾಮಾನ್ಯ ಶೀತದಿಂದ ಹೇಗೆ ಭಿನ್ನ?

ಸಾಮಾನ್ಯ ಶೀತದಲ್ಲಿ ಈ ಲಕ್ಷಣಗಳ ಪರಿಣಾಮ ಕಡಿಮೆ ಇರುತ್ತವೆ, ನಿಧಾನವಾಗಿ ಹರಡುತ್ತವೆ ಮತ್ತು ಗಂಭೀರವಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಅಲರ್ಜಿ, ಅಸ್ತಮಾ ಹೊಂದಿರುವವರು ಬಲು ಬೇಗ ಈ ಸಮಸ್ಯೆಗೆ ಗುರಿಯಾಗುತ್ತಾರೆ ಏಕೆಂದರೆ ಇದು ಈಗಾಗಲೇ ಅಸ್ಥಿತ್ವದಲ್ಲಿರುವ ಹೈಪರ್‍ ಆಕ್ಟಿವ್‌ ಉಸಿರಾಟದ ಸಮಸ್ಯೆಯನ್ನು ಉತ್ತೇಜಿಸುತ್ತದೆ. ಆದರೆ ಪ್ರತಿಯೊಬ್ಬರಲ್ಲೂ ಈ ಸಮಸ್ಯೆ ಬೇರೆ ಬೇರೆಯಾಗಿ ಕಾಣಿಸಿಕೊಳ್ಳುವುದೇಕೆ?

ಇನ್ಫ್ಲುಯೆನ್ಜಾ ಎ ಮತ್ತು ಬಿ ಎಂದು ಎರಡು ವಿಧದಲ್ಲಿ ವಿಂಗಡಿಸಲಾಗಿದೆ.

ವೈರಸ್‌ ಮೇಲಿನ ಪ್ರೋಟೀನ್‌ಗೆ ಅನುಗುಣವಾಗ ಇನ್ಫ್ಲುಯೆನ್ಜಾ ಎ ವಿಧವನ್ನು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ.
-ಹೆಚ್‌1ಎನ್‌1 : ಸ್ವೈನ್‌ ಫ್ಲೂ, ಸ್ಪಾನಿಷ್‌ ಫ್ಲೂ ನಂತಹ ಸಾಂಕ್ರಾಮಿಕವನ್ನು ಸೃಷ್ಟಿಸಬಲ್ಲದು. ಯುವ ರೋಗಿಗಳಲ್ಲಿ ಇದು ಮಾರಕ ಸಮಸ್ಯೆಯಾಗಿ ಕಾಡಬಹುದಾಗಿದೆ.
-ಹೆಚ್‌3ಎನ್‌2 : ಹಿರಿಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವಂತದ್ದು ಮತ್ತು ವೇಗದಲ್ಲಿ ರೂಪಾಂತರಗೊಳ್ಳುವ ಸೋಂಕು
-ಹೆಚ್‌5ಎನ್‌2 : ಇದನ್ನು ಎವಿಯನ್‌ ಫ್ಲೂ ಎಂದೂ ಹೇಳಲಾಗುತ್ತದೆ.

ಇನ್ಫ್ಲುಯೆನ್ಜಾ ಬಿ ಸಾಮಾನ್ಯವಾಗಿ ಪಿಡುಗಾಗಿ ಹರಡುವಂತದ್ದಲ್ಲ. ಇದೊಂದು ಸೌಮ್ಯವಾದ ವೈರಸ್‌ ಹಾಗೂ ವಾತಾವರಣದ ಬದಲಾವಣೆಗೆ ಸಂಬಂಧಿಸಿದ್ದು. ಹೊಸ ರೂಪಾಂತರಿ ಹೆಚ್‌3ಎನ್‌2 ಉಪ ವಿಧ ‘ಕೆ’ ಸದ್ಯ ಹಲವು ದೇಶಗಳಲ್ಲಿ ಪತ್ತೆಯಾಗಿದೆ. ಆದರೆ ಹೆದರುವ ಅವಶ್ಯಕತೆ ಇಲ್ಲ, ಇದು ವೈರಸ್‌ಗಳ ಸಾಮಾನ್ಯ ಲಕ್ಷಣಗಳಾಗಿವೆ. ವೈರಸ್‌ಗಳು ಬದಲಾಗುವ, ರೂಪಾಂತರಗೊಳ್ಳುವ ಹಾಗೂ ಕೆಲವು ಭಾಗಗಳ ಮಿಶ್ರಣದಿಂದ ಹೊಸ ರೂಪ ಪಡೆಯುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇವು ಸಣ್ಣ ಪ್ರಮಾಣದಲ್ಲಿ ಉಂಟಾದಾಗ ವಾತಾವರಣಕ್ಕೆ ತಕ್ಕಂತೆ ಫ್ಲೂ ಆಗಿ ಪರಿಣಮಿಸುತ್ತದೆ.
ಒಮ್ಮೆ ಇವು ದೊಡ್ಡ ಪ್ರಮಾಣದಲ್ಲಿ ರೂಪಾಂತರ ಉಂಟಾದಲ್ಲಿ ಅಥವಾ ಹಕ್ಕಿಗಳು, ಹಂದಿಯಂತಹ ವಾಹಕಗಳು ಇದ್ದಲ್ಲಿ ಸೋಂಕು ವೇಗದಲ್ಲಿ ಹರಡಿ ಸಾಂಕ್ರಾಮಿಕ ಪಿಡುಗಾಗಿ ಮಾರ್ಪಾಡಾಗುತ್ತವೆ.

ಲಸಿಕೆ ಪರಿಣಾಮಕಾರಿಯೇ?
ಖಂಡಿತ ಲಸಿಕೆ ಪಡೆಯುವುದು ಪರಿಣಾಮಕಾರಿಯಾಗಿರುತ್ತವೆ. ವ್ಯಾಕ್ಸಿನ್‌ಗಳಲ್ಲಿ ರಕ್ಷಣಾತ್ಮಕ ಪರಿಣಾಮಗಳು ಇರುವುದರಿಂದ ರೋಗದ ತೀವ್ರತೆಯನ್ನು ತಗ್ಗಿಸಲು ನೆರವಾಗುತ್ತವೆ. ಹೀಗಾಗಿ ಈ ಫ್ಲೂ ಹರಡುತ್ತಿರುವ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರುವುದು ಉತ್ತಮ.

  • ಜೂನ್‌ ಅಥವಾ ಡಿಸೆಂಬರ್‍ಗೂ ಮೊದಲು ಅಂದರೆ ಫ್ಲೂ ಹರಡುವ ಸಮಯ ಆರಂಭಕ್ಕೂ ಮುನ್ನ ಫ್ಲೂ ಲಸಿಕೆ ಪಡೆಯುವುದು ಉತ್ತಮ.
  • ಜನಸಂದಣಿ ಇರುವ ಸ್ಥಳಗಳಲ್ಲಿ ಅಥವಾ ರೋಗಿಗಳನ್ನು ಭೇಟಿ ಮಾಡುವಾಗ ಮಾಸ್ಕ್‌ ಬಳಕೆ ಇರಲಿ.
  • ಸಾಮಾಜಿಕ ಅಂತರ, ಸರಿಯಾದ ರೀತಿಯಲ್ಲಿ ಕೈ ತೊಳೆಯುವ ಅಭ್ಯಾಸವಿರಲಿ
  • ಉತ್ತಮ ಆರಾಮ ಕೂಡ ಮುಖ್ಯ

ತಜ್ಞರು ಸಲಹೆ ನೀಡದಿದ್ದಲ್ಲಿ ವೈರಲ್‌ ಸೋಂಕಿನ ಸಮಯದಲ್ಲಿ ಆಂಟಿಬಯೋಟಿಕ್‌ ಬಳಕೆ ಬೇಡ. ಸ್ವಯಂ ಆರೈಕೆ ಮಾಡದೇ ವೈದ್ಯರ ಸಲಹೆ ಪಡೆಯಿರಿ. ತೀವ್ರ ಜ್ವರದ ಸಂದರ್ಭದಲ್ಲಿ ಆಂಟಿವೈರಲ್‌ಗಳ ಸಲಹೆ ನೀಡಲಾಗುತ್ತದೆ. ಕೆಮ್ಮು ಹೆಚ್ಚಾದಾಗ ಇನ್‌ಹೇಲರ್‍ಗಳ ಬಳಕೆಯನ್ನು ಕೂಡ ಸಲಹೆ ನೀಡಲಾಗುತ್ತದೆ.

Must Read

error: Content is protected !!