ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಜನಸಂಖ್ಯೆಗಿಂತಲೂ ವಾಹನ ಸಂಖ್ಯೆ ಅತಿಯಾಗಿದ್ದು, ಟ್ರಾಫಿಕ್ ಜಾಮ್ ತಲ್ಲಣ ಹುಟ್ಟಿಸುತ್ತಿದೆ. ಇನ್ನು ನಗರದಲ್ಲಿ ಅನೇಕ ಜಾಗಗಳಲ್ಲಿ ಬೇಕಾಬಿಟ್ಟಿ ಅನಧಿಕೃತ ಪಾರ್ಕಿಂಗ್ ಕೂಡ ಹೆಚ್ಚಾಗಿದ್ದು, ಸುಗಮ ಸಂಚಾರಕ್ಕೆ ಹೊಡೆತ ಬಿದ್ದಿದೆ. ಹೀಗಾಗಿ ನಗರದಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿ ಮಾಡಲು ಜಿಬಿಎ ಹಾಗೂ ಸಂಚಾರ ಪೊಲೀಸ್ ನಿರ್ಧರಿಸಿದೆ.
ನಗರದ ರಾಜಾಜಿನಗರ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಶಿವನಗರದಲ್ಲಿ ರಸ್ತೆಗಳು ಪಾರ್ಕಿಂಗ್ಗೆ ಮಾತ್ರ ಸೀಮಿತವಾಗಿವೆ. ಪಾರ್ಕ್ ಮಾಡಿ ವರ್ಷಾನುಗಟ್ಟಲೆ ಆದರೂ ವಾಹನಗಳ ಮಾಲೀಕರು ಇತ್ತ ತಿರುಗಿ ನೋಡುತ್ತಿಲ್ಲ. ವಾಹನಗಳು ಧೂಳು ಹಿಡಿದು, ತುಕ್ಕು ಹಿಡಿದರೂ ಇಲ್ಲೇ ಬಿದ್ದಿವೆ ಎಂದು ಜನ ಆರೋಪಿಸಿದ್ದಾರೆ.
ಇನ್ನು ಮಲ್ಲೇಶ್ವರಂ 8ನೇ ಮುಖ್ಯರಸ್ತೆ ಜನವಸತಿ ಪ್ರದೇಶಗಳೂ ಅನಾಮಿಕರ ವಾಹನಗಳ ಪಾರ್ಕಿಂಗ್ ಸ್ಪಾಟ್ ಆಗಿವೆ. 2019ರಲ್ಲಿ ನಿಲ್ಲಿಸಿಹೋಗಿದ್ದ ವಾಹನವೊಂದು ಇನ್ನೂ ಕದಲಲೇ ಇಲ್ಲ. ಸ್ಕ್ರಾಪ್ ಆದ ವಾಹನಕ್ಕೂ ಕೂಡ ಇದೇ ಆಶ್ರಯತಾಣ. ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸ್ಥಳೀಯರು ವಿಚಾರ ಮುಟ್ಟಿಸಿದರೂ ಏನೂ ಪ್ರಯೋಜನವಾಗಿಲ್ಲ.
ನಗರದ ಹಲವು ಕಡೆಗಳಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ಮಾಡುವ ಕೆಟ್ಟ ಪ್ರವೃತ್ತಿ ಹೆಚ್ಚಾಗಿದೆ. ಹೀಗಾಗಿಯೇ ಟೋಯಿಂಗ್ ವ್ಯವಸ್ಥೆ ಮತ್ತೆ ಜಾರಿ ಮಾಡುತ್ತಿರುವುದು ಒಳ್ಳೆಯದೇ ಎಂದು ಸಾರ್ವಜನಿಕರು ಸಹಮತ ವ್ಯಕ್ತಪಡಿಸಿದ್ದಾರೆ.



