March 22, 2026
Sunday, March 22, 2026
spot_img

ಮಕ್ಕಳ ಭವಿಷ್ಯದ ಜೊತೆ ಆಟವಾಡದಿರಿ: ‘ಮ್ಯಾಗ್ನೆಟ್’ ನೀತಿ ಕೈಬಿಡಲು ಎಐಡಿಎಸ್‌ಓ ಆಗ್ರಹ

ಹೊಸದಿಗಂತ ಚಿತ್ರದುರ್ಗ

ತಾಲೂಕಿನ ಮಲ್ಲಾಪುರ ಗೊಲ್ಲರಹಟ್ಟಿಯ ಕರಿಯಮ್ಮ ದೇವಾಲಯದ ಆವರಣದಲ್ಲಿ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಹಾಗೂ ಪೋಷಕರು ಬೃಹತ್ ಪ್ರತಿಭಟನೆ ನಡೆಸಿದರು. ಎಐಡಿಎಸ್‌ಓ ಸಂಘಟನೆಯ ನೇತೃತ್ವದಲ್ಲಿ ನಡೆದ ಈ ಹೋರಾಟವು, ಹಳ್ಳಿಗಳ ಶಿಕ್ಷಣ ಕೇಂದ್ರಗಳನ್ನು ಅಳಿಸಿಹಾಕುತ್ತಿರುವ ‘ಕೆಪಿಎಸ್ ಮ್ಯಾಗ್ನೆಟ್’ ಯೋಜನೆಯನ್ನು ತೀವ್ರವಾಗಿ ಖಂಡಿಸಿತು.

ರಾಜ್ಯಾದ್ಯಂತ ಸುಮಾರು 5,900 ಪಂಚಾಯಿತಿಗಳಲ್ಲಿ ಈ ಮಾದರಿ ಶಾಲೆಗಳನ್ನು ಆರಂಭಿಸುವ ನೆಪದಲ್ಲಿ, 5 ಕಿ.ಮೀ ವ್ಯಾಪ್ತಿಯಲ್ಲಿರುವ ಸಣ್ಣ ಶಾಲೆಗಳನ್ನು ಮುಚ್ಚುವುದು ಸರ್ಕಾರದ ಗುಪ್ತ ಕಾರ್ಯಸೂಚಿಯಾಗಿದೆ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಹಾಂತೇಶ ಆರೋಪಿಸಿದರು.

ಮಲ್ಲಾಪುರ ಗೊಲ್ಲರಹಟ್ಟಿಯ ಶಾಲೆಯಲ್ಲಿ 80ಕ್ಕೂ ಅಧಿಕ ಮಕ್ಕಳಿದ್ದು, ಇದನ್ನು ಪಿಳ್ಳೆಕೇರೆನಹಳ್ಳಿಗೆ ವಿಲೀನಗೊಳಿಸಿದರೆ ಕೂಲಿ ಕಾರ್ಮಿಕರ ಮತ್ತು ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ.

ಗಣಿಗಾರಿಕೆ ಬಾಧಿತ ಪ್ರದೇಶಗಳ ಸುಧಾರಣೆಗೆ ಮೀಸಲಿರುವ KME-RC (ಕರ್ನಾಟಕ ಮೈನಿಂಗ್ ಎನ್ವಿರಾನ್ಮೆಂಟ್ ರೀಸ್ಟೋರೇಶನ್ ಕಾರ್ಪೊರೇಷನ್) ನಿಧಿಯನ್ನು, ಶಾಲೆಗಳನ್ನು ಮುಚ್ಚುವ ಜನವಿರೋಧಿ ನೀತಿಗೆ ಬಳಸುತ್ತಿರುವುದು ಖೇದಕರ ಎಂದು ಪ್ರತಿಭಟನಾಕಾರರು ದೂರಿದರು.

ಕಳೆದ 15 ವರ್ಷಗಳಲ್ಲಿ ಈಗಾಗಲೇ 17 ಲಕ್ಷ ವಿದ್ಯಾರ್ಥಿಗಳು ಶೈಕ್ಷಣಿಕ ವ್ಯವಸ್ಥೆಯಿಂದ ಹೊರಗುಳಿದಿದ್ದು, ಈಗಿನ ಹೊಸ ನೀತಿಯಿಂದ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ವ್ಯಕ್ತಪಡಿಸಲಾಗಿದೆ. ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಗ್ರಾಮೀಣ ಶಾಲೆಗಳ ಅಸ್ತಿತ್ವ ಕಾಪಾಡಬೇಕು ಎಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಕೆ. ಈರಣ್ಣ, ಕಾರ್ಮಿಕ ಮುಖಂಡ ರವಿಕುಮಾರ್, ಶಿಕ್ಷಣ ಉಳಿಸಿ ಸಮಿತಿಯ ತಿಪ್ಪೇಸ್ವಾಮಿ ಬಿ., ಕಾಮಾಕ್ಷಮ್ಮ ಹಾಗೂ ಗ್ರಾಮದ ನೂರಾರು ಪೋಷಕರು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !