ಹೊಸದಿಗಂತ ವರದಿ, ಗದಗ :
ಅಮರನಾಥ ಯಾತ್ರೆಯಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡ ಯಾತ್ರೆಗಳು ಯಾರು ಭಯಭೀತಗೊಳ್ಳಬಾರದು ಸರಕಾರ ನಿಮ್ಮನ್ನು ಸುರಕ್ಷತವಾಗಿ ಮರಳಿ ಕರೆತರಲು ಎಲ್ಲ ಸಿದ್ದತೆ ನಡೆಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ಅವರು ಹೇಳಿದರು.
ಅಮರನಾಥ ಯಾತ್ರೆಯಲ್ಲಿ ರಸ್ತೆ ಮಧ್ಯ ಸಿಲುಕಿಕೊಂಡಿರುವ ಯಾತ್ರಿಗಳ ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬಲು ನಗರದ ಗಂಗಾಪೂರ ಪೇಟೆಯಲ್ಲಿ ವೀರಜೀಬಾಯಿ ಪಟೇಲ ಅವರ ನಿವಾಸಕ್ಕೆ ತೆರಳಿ ಯಾತ್ರಿಗಳನ್ನು ಸುರಕ್ಷತವಾಗಿ ಕರೆತರುವ ಭರವಸೆಯೊಂದಿಗೆ ಮಾತನಾಡಿದ ಅವರು ಅಮರನಾಥ ಯಾತ್ರಿಗಳು ಸುರಕ್ಷತವಾಗಿದ್ದು ಅವರನ್ನು ವಾತಾವರಣ ತಿಳಿಗೊಂಡ ನಂತರ ಹೆಲಿಕಾಪ್ಟರ್ ಮೂಲಕ ನಗರದ 23 ಯಾತ್ರಿಗಳು ಸೇರಿದಂತೆ ಕರ್ನಾಟಕದ 350 ಕ್ಕೂ ಪ್ರವಾಸಿಗರನ್ನು ಸುರಕ್ಷತವಾಗಿ ಕರೆತರಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಸಂಪರ್ಕದಲ್ಲಿದ್ದು ಯಾರೂ ಆತಂಕಗೊಳ್ಳಬಾರದು ಎಂದು ಹೇಳಿದ್ದಾರೆ.
ನಂತರ ಅಮರನಾಥ ಯಾತ್ರೆಯಲ್ಲಿ ಸಿಲುಕಿಕೊಂಡಿರುವ ತಂಡದಲ್ಲಿರುವ ವಿಶಾಲ ಮುಂದಡಾ ಹಾಗೂ ಬೆಟಗೇರಿಯಿಂದ ತೆರಳಿದ ಆನಂದ ಗುಡಿಮನಿ ಅವರೊಂದಿಗೆ ಪೋನ್‌ನಲ್ಲಿ ಮಾತನಾಡಿ, ಎರಡು ದಿನಗಳೊಳಗೆ ಎಲ್ಲರನ್ನು ಸುರಕ್ಷಿತವಾಗಿ ಕರೆತರಲಾಗುವುದು ಯಾವುದೇ ಭಯಬೇಡ ಎಂದು ಭರವಸೆ ಮೂಡಿಸಿದರು.
ನಂತರ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ರಶ್ಮೀ ಅವರು ಸಚಿವ ಎಚ್.ಕೆ.ಪಾಟೀಲ ಅವರೊಂದಿಗೆ ಪೋನ್‌ನಲ್ಲಿ ಮಾತನಾಡಿ, ಅಮರನಾಥ ಗುಹೆಯಿಂದ 6 ಕಿಮೀ ದೂರದಲ್ಲಿ ಸಂಕಷ್ಟದಲ್ಲಿರುವ ಜಿಲ್ಲೆಯ 23 ಜನರನ್ನು ಪಂಜ್‌ತರ್ಣಿ ಬೆಸ್ ಕ್ಯಾಂಪ್‌ನಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದ್ದು ಯಾತ್ರಿಕರು ಕುಟುಂಬದವರು ಆತಂಕ ಪಡುವ ಅವಶ್ಯಕತೆಯಲ್ಲ ನಮ್ಮ ಟಿಮ್ ಗದುಗಿನ 23 ಯಾತ್ರಿಗಳಲ್ಲಿ ವಿಶಾಲ ಹಾಗೂ ವಿನೋದ ಅವರೊಂದಿಗೆ ಮಾತನಾಡಿದ್ದಾರೆ ಅವರು ಆದಷ್ಟು ಬೇಗನೆ ನಮ್ಮನ್ನು ಇಲ್ಲಿಂದ ಸ್ಥಳಾಂತರಿಸಿ ಎಂದು ಹೇಳಿದ್ದಾರೆ. ಎರಡು ದಿನಗಳ ಒಳಗೆ ವಾತಾವರಣ ತಿಳಿಗೊಂಡ ನಂತರ ಅವರನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲಾಗುವುದು ಅಲ್ಲದೆ, ಈ ಬಗ್ಗೆ ನಾಲ್ಕು ಉನ್ನತ ಅಧಿಕಾರಿಗಳ ತಂಡ ಅಲ್ಲಿಗೆ ತೆರಳಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟೇಲ್, ಪಾಲರೀಶಾ, ಭದ್ರಾ, ಮುಂದಡಾ,ಸಾಂಗನಿ ಕುಟುಂಬದ ಸದಸ್ಯರು, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಬು ಬುರಬುರೆಮ ಯುವ ಮುಖಂಡ ಪ್ರಕಾಶ ಖೋಡೆ ಸೇರಿದಂತೆ ಮುಂತಾದವರು ಇದ್ದರು.