Doom scrolling | ಹೆಚ್ಚಾಗುತ್ತಿದೆ ಡೂಮ್​ಸ್ಕ್ರೋಲಿಂಗ್​​: ಹೀಗಂದ್ರೇನು? ನಿಮಗೂ ಇದ್ಯಾ ಈ ಗೀಳು?

ಇಂದಿನ ಡಿಜಿಟಲ್ ಯುಗದಲ್ಲಿ ಬೆಳಗ್ಗೆ ಕಣ್ಣು ತೆರೆಯುತ್ತಿದ್ದಂತೆಯೇ ಮೊಬೈಲ್ ಹಿಡಿಯುವುದು ಸಾಮಾನ್ಯವಾಗಿದೆ. ಒಂದು ಕ್ಷಣವೂ ಕೈಯಿಂದ ದೂರವಿಡಲು ಮನಸ್ಸೇ ಮಾಡದ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಈ ಅಭ್ಯಾಸವೇ ನಿಧಾನವಾಗಿ ಡೂಮ್​ಸ್ಕ್ರೋಲಿಂಗ್​​ ಎಂಬ ಹೆಸರಿನ ಗೀಳಾಗಿ ಪರಿಣಮಿಸಿದೆ. ಅಂದರೆ, ನಿರಂತರವಾಗಿ ಮೊಬೈಲ್ ಸ್ಕ್ರೀನ್ ಸ್ಕ್ರೋಲ್ ಮಾಡುತ್ತಾ, ಅಪ್‌ಡೇಟ್‌ಗಳು, ಸುದ್ದಿ, ರೀಲ್ಸ್‌ಗಳು, ಸ್ಟೇಟಸ್‌ಗಳ ನಡುವೆ ಸಮಯ ಕಳೆದುಹೋಗುವುದು. ಇದರ ಪರಿಣಾಮವಾಗಿ ನಾವು ತಿಳಿಯದೇ ಹಲವಾರು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಆಹ್ವಾನ ನೀಡುತ್ತಿದ್ದೇವೆ.

ಜಾಗತಿಕ ಅಧ್ಯಯನಗಳ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ ಸರಾಸರಿ 6 ಗಂಟೆ 35 ನಿಮಿಷಗಳನ್ನು ಮೊಬೈಲ್‌ನಲ್ಲಿ ಕಳೆಯುತ್ತಾನೆ. ಇದರಲ್ಲಿ ಹೆಚ್ಚಿನ ಸಮಯವು ಡೂಮ್​ಸ್ಕ್ರೋಲಿಂಗ್​​ನಲ್ಲೇ ವ್ಯರ್ಥವಾಗುತ್ತದೆ. ಇದರಿಂದ ಒತ್ತಡ, ಆತಂಕ, ಖಿನ್ನತೆ, ಕುತ್ತಿಗೆ ನೋವು, ನಿದ್ರೆ ಕೊರತೆ ಮೊದಲಾದವು ಕಾಡಲು ಶುರುವಾಗುತ್ತವೆ. ತಜ್ಞರ ಪ್ರಕಾರ ಮಲಗುವ ಮುನ್ನ ಒಂದು ಗಂಟೆ ಮೊಬೈಲ್ ಬಳಸದೇ ಇರಲು ಶಿಫಾರಸು ಮಾಡಲಾಗಿದೆ. ಇದರಿಂದ ದೇಹ-ಮನಸ್ಸಿಗೆ ವಿಶ್ರಾಂತಿ ದೊರಕುತ್ತದೆ.

2001ರಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ ದಾಳಿ ಉದಾಹರಣೆಗೆ ಸಾಕು. ಆ ದೃಶ್ಯವನ್ನು ಟಿವಿಯಲ್ಲಿ ಒಂದೇ ಬಾರಿ ನೋಡಿದವರಿಗೂ ಮಾನಸಿಕ ಆಘಾತ ಉಂಟಾಗಿತ್ತು. ಆದರೆ ಇಂದಿನ ಕಾಲದಲ್ಲಿ ಇಂತಹ ದೃಶ್ಯಗಳನ್ನು ಮರುಮರು ನೋಡುತ್ತಾ ಮನಸ್ಸನ್ನು ವಿಚಲಿತಗೊಳಿಸುವುದೇ ಡೂಮ್ಸ್ಕ್ರೋಲಿಂಗ್. ಇದು ಪೋಸ್ಟ್-ಟ್ರೊಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ಹೀಗಿನ ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ.

ಡೂಮ್​ಸ್ಕ್ರೋಲಿಂಗ್ ನಿಂದ ತಪ್ಪಿಸಿಕೊಳ್ಳುವ ಕೆಲವು ಮಾರ್ಗಗಳು

ಸೋಷಿಯಲ್ ಮೀಡಿಯಾ ಆ್ಯಪ್‌ಗಳನ್ನು ಕಡಿಮೆ ಬಳಸಿ ಅಥವಾ ಅಗತ್ಯವಿಲ್ಲದಿದ್ದರೆ ಡಿಲೀಟ್ ಮಾಡಿ.

ದಿನಕ್ಕೆ ಮೊಬೈಲ್ ಬಳಸುವ ಸಮಯವನ್ನು ನಿಗದಿಪಡಿಸಿಕೊಳ್ಳಿ.

ನೋಟಿಫಿಕೇಷನ್‌ಗಳನ್ನು ಆಫ್ ಮಾಡಿ, ಅಗತ್ಯವಿದ್ದಾಗ ಮಾತ್ರ ಆ್ಯಪ್ ತೆರೆಯಿರಿ.

ಮಲಗುವಾಗ ಮೊಬೈಲ್ ಹತ್ತಿರ ಇಡುವುದನ್ನು ಬಿಟ್ಟು ಓದುವುದು ಅಥವಾ ಶಾಂತ ಸಂಗೀತವನ್ನು ಕೇಳಿ.

ದಿನನಿತ್ಯದ ಚಟುವಟಿಕೆಗಳಲ್ಲಿ ಚಿಕ್ಕ ಬದಲಾವಣೆಗಳನ್ನು ಮಾಡಿ, ಮನಸ್ಸನ್ನು ಬೇರೆ ಕಡೆ ತೊಡಗಿಸಿ.

ಡೂಮ್​ಸ್ಕ್ರೋಲಿಂಗ್​​ ನಮ್ಮ ಜೀವನದಲ್ಲಿ ಕಾಣದ ಶತ್ರುವಿನಂತೆ ಕೆಲಸ ಮಾಡುತ್ತಿದೆ. ಸಮಯ, ಆರೋಗ್ಯ, ಶಾಂತಿ ಎಲ್ಲವನ್ನೂ ಹೀರಿಕೊಳ್ಳುತ್ತಿದೆ. ಹೀಗಾಗಿ ಈ ಗೀಳನ್ನು ತೊರೆದು ತಂತ್ರಜ್ಞಾನವನ್ನು ನಿಯಂತ್ರಣದಲ್ಲಿಟ್ಟುಕೊಂಡು ಬಳಸುವುದೇ ಉತ್ತಮ. ಇಲ್ಲವಾದರೆ ಇದು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!