ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅನಪೇಕ್ಷಿತ ಘಟನೆಗಳ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಹಿಂದು ಸಂಘಟನೆಗಳ ಪ್ರಮುಖರ ಮನೆಗಳಿಗೆ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿರುವುದನ್ನು ವಿರೋಧಿಸಿ ಜೂ.1ರಂದು ರಾತ್ರಿ ಕಡಬ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದ ಕಡಬದ ಹಿಂದು ಸಂಘಟನೆಯ 15 ಮಂದಿ ಕಾರ್ಯಕರ್ತರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರ ಸೂಚನೆಯಂತೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಂಘಟನೆಗಳ ಪ್ರಮುಖರ ಮನೆಗಳಿಗೆ ರಾತ್ರಿ ವೇಳೆ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾರoಭಿಸಿದ್ದರು. ಅದರಿಂದ ಆಕ್ರೋಶಕೊಂಡಿದ್ದ ಹಿಂದು ಸಂಘಟನೆಯ ಕಾರ್ಯಕರ್ತರು ಪೊಲೀಸರು ಮನೆಗೆ ಬರುವುದು ಬೇಡ. ಆದುದರಿಂದ ನಮ್ಮ ಮನೆಯವರಿಗೂ ತೊಂದರೆಯಾಗುತ್ತಿದೆ. ಪೊಲೀಸರು ರಾತ್ರಿ ವೇಳೆ ಮನೆಗಳಿಗೆ ಬಂದು ವಿಚಾರಣೆ ನಡೆಸಿ ಫೋಟೋ ತೆಗೆದುಕೊಂಡು ಹೋಗಿ ನಮ್ಮನ್ನು ರೌಡಿಗಳಂತೆ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿ ಠಾಣೆಯ ಮುಂದೆ ಜಮಾಯಿಸಿ ಪೊಲೀಸ್ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದರು. ಪೊಲೀಸರು ಮನೆಗೆ ಬರಬೇಕಾಗಿಲ್ಲ. ಅದರ ಬದಲು ನಾವೇ ಠಾಣೆಗೆ ಬಂದಿದ್ದೇವೆ. ಪ್ರತಿ ದಿನ ಮನೆಗೆ ಬಂದು ತೊಂದರೆ ನೀಡಬೇಡಿ ಎಂದು ಆಗ್ರಹಿಸಿದ್ದರು.
ಠಾಣೆಯ ಮುಂದೆ ಜಮಾಯಿಸಿದ್ದವರ ಜೊತೆ ಮಾತುಕತೆ ನಡೆಸಿದ ಕಡಬ ಎಸ್ ಐ ಅಭಿನಂದನ್ ಎಂ.ಎಸ್. ಅವರು ಪೊಲೀಸ್ ಉನ್ನತಧಿಕಾರಿಗಳ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ಏನೇ ಇದ್ದರೂ ನಾಳೆ ಹಗಲು ಬಂದು ಮಾಹಿತಿ ಪಡೆದುಕೊಳ್ಳಿ. ರಾತ್ರಿ ವೇಳೆ ಈ ರೀತಿ ಠಾಣೆಯ ಮುಂದೆ ಸೇರುವುದು ಸರಿಯಲ್ಲ ಎಂದು ಸಮಾಧಾನಿಸಿ ಅವರನ್ನು ಕಳುಹಿಸಿದ್ದರು.
ಪ್ರಕರಣ ದಾಖಲು
ಬಳಿಕ ನಡೆದ ಬೆಳವಣಿಗೆಯಲ್ಲಿ ಘಟನೆಗೆ ಸಂಬಂಧಿಸಿ ಕಡಬ ಠಾಣಾ ವ್ಯಾಪ್ತಿಯ ನಿವಾಸಿಗಳಾದ ಪ್ರಮೋದ್ ರೈ, ತಿಲಕ್ ನಂದುಗುರಿ, ಮೋಹನ, ಚಂದ್ರಶೇಖರ, ಮಹೇಶ್, ಡೀಕಯ್ಯ, ಸುಜಿತ್, ಶರತ್, ಶ್ರೇಯತ್, ಉಮೇಶ್, ರಾಧಾಕೃಷ್ಣ ಕೆ., ಜಯಂತ್ ಮತ್ತು ಇತರ ಮೂವರು ಯಾವುದೇ ಪೂರ್ವಾನುಮತಿ ಪಡೆಯದೇ, ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕಡಬ ಠಾಣೆಯ ಮುಂಭಾಗದಲ್ಲಿ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿದೆ.