ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ಬರ್ಬರ ಹತ್ಯೆಯಾಗಿದ್ದು, ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಅವರನ್ನುಕೊಲೆಮಾಡಲಾಗಿದೆ.
ಬೆಂಗಳೂರಿನ ಅಮೃತಹಳ್ಳಿಯಲ್ಲಿ ಏರೋನಿಕ್ಸ್ ಇಂಟರ್ನೆಟ್ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ, ಸಿಎಒ ವಿನು ಕುಮಾರ್ ಅವರನ್ನು ಈ ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಎಂಬಾತ ಈ ಕೊಲೆ ಮಾಡಿದ್ದಾನೆ.
ಏರೋನಿಕ್ಸ್ ಕಂಪನಿಯಿಂದ ಹೊರ ಬಂದ ಫೆಲಿಕ್ಸ್ ತನ್ನದೇ ಸ್ವಂತ ಕಂಪನಿ ಆರಂಭಿಸಿದ್ದ. ತನ್ನ ಉದ್ಯಮಕ್ಕೆ ಹಳೇ ಕಂಪನಿ ಎದುರಾಳಿ ಆಗಿದ್ದರಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆಗೆ ಸಂಚು ಹೂಡಿದ್ದ ಫೆಲಿಕ್ಸ್, ಇಂದು ಸಂಜೆ 4 ಗಂಟೆಗೆ ಚಾಕು ಮತ್ತು ತಲ್ವಾರ್ನಿಂದ ಫಣೀಂದ್ರ ಮತ್ತು ವಿನು ಕುಮಾರ್ ಮೇಲೆ ದಾಳಿ ಮಾಡಿ, ಕೊಲೆಗೈದಿದ್ದಾನೆ.
ಪ್ರಕರಣದ ಬಳಿಕ ಆರೋಪಿಗಳು ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ. ಆರೋಪಿ ಫೆಲಿಕ್ಸ್ ಜೋಕರ್ ಫೆಲಿಕ್ಸ್ ಎಂದೂ ಕರೆಸಿಕೊಳ್ಳುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯನಾಗಿದ್ದ ಎನ್ನಲಾಗಿದೆ.
ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್
ಕೊಲೆ ಬಳಿಕ ಪರಾರಿಯಾದ ಆರೋಪಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ನಾನು ಒಳ್ಳೆಯ ವ್ಯಕ್ತಿಗಳನ್ನು ಎಂದಿಗೂ ನೋಯಿಸುವುದಿಲ್ಲ” ಎಂದು ಪೋಸ್ಟ್ ಹಂಚಿಕೊಂಡಿದ್ದಾನೆ.
ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧಕಾರ್ಯ ನಡೆಸುತ್ತಿರುವ ನಡುವೆಯೇ ಗೌಪ್ಯ ಸ್ಥಳದಲ್ಲಿ ತಲೆಮರೆಸಿಕೊಂಡಿರುವ ಫೆನಿಕ್ಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ‘ಈ ಗ್ರಹದ ಜನರು ಯಾವಾಗಲೂ ಮೋಸಗಾರರು. ಆದ್ದರಿಂದ ನಾನು ಕೆಟ್ಟ ಜನರನ್ನು ಮಾತ್ರ ನೋಯಿಸುತ್ತೇನೆ. ನಾನು ಯಾವುದೇ ಒಳ್ಳೆಯ ಜನರನ್ನು ನೋಯಿಸುವುದಿಲ್ಲ’ ಎಂದು ಪೋಸ್ಟ್ ಹಂಚಿಕೊಂಡಿದ್ದಾನೆ.
ಪ್ರಕರಣ ಸಂಬಂಧ ಮಾತನಾಡಿದ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ ಗುಪ್ತಾ, ಸಂಜೆ 4 ಗಂಟೆ ಸುಮಾರಿಗೆ ಕೊಲೆ ನಡೆದಿದೆ. ಮೂವರು ಆರೋಪಿಗಳಿಂದ ಈ ಕೃತ್ಯ ಎಸಗಲಾಗಿದೆ. ಗಂಭೀರವಾಗಿ ಗಾಯಗೊಂಡು ಕಂಪನಿಯ ಎಂಡಿ ಮತ್ತು ಸಿಇಒ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇವರು ಕಳೆದ 7 ತಿಂಗಳ ಹಿಂದೆ ಕಂಪನಿ ಶುರುಮಾಡಿದ್ದರು. ಕೃತ್ಯವೆಸಗಿದ ಮೂವರು ಆರೋಪಿಗಳ ಪೈಕಿ ಇಬ್ಬರ ಸುಳಿವು ಸಿಕ್ಕಿದೆ ಎಂದರು.