ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಣಿಕರ ನಾನಾ ದೂರುಗಳ ಬೆನ್ನಲ್ಲೇ ಆರ್‌ಟಿಓ (RTO) ಅಧಿಕಾರಿಗಳು ಆಟೋ ಚಾಲಕರ ವಿರುದ್ಧ ಭರ್ಜರಿ ಕಾರ್ಯಾಚರಣೆಗೆ ಇಳಿದಿದ್ದು, ಒಂದು ವಾರದಲ್ಲಿ ಸಾವಿರಕ್ಕೂ ಹೆಚ್ಚು ಆಟೋಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ನಗರದಾದ್ಯಂತ ನಡೆಯುತ್ತಿರುವ ಈ ತಪಾಸಣೆಯಲ್ಲಿ ವಿಶೇಷವಾಗಿ ಆ್ಯಪ್ ಆಧಾರಿತ ಆಟೋಗಳ ಮೇಲೆಯೇ ಹೆಚ್ಚು ಕ್ರಮ ಜರುಗಿದೆ.
ದುಪ್ಪಟ್ಟು ದರ ವಸೂಲಿಗೆ ಖಡಕ್ ಕ್ರಮ
ಬೈಕ್ ಟ್ಯಾಕ್ಸಿಗೆ ನಿಷೇಧ ಹೇರಲಾಗುತ್ತಿದ್ದಂತೆ, ಕೆಲ ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಹೆಚ್ಚಾಗಿದ್ದು, ಈ ಹಿನ್ನೆಲೆ ಕಳೆದ ವಾರದಿಂದ ನಗರದಲ್ಲಿ 11 ಆರ್‌ಟಿಓ ಕಚೇರಿಗಳ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ತಂಡಗಳನ್ನ ರಚಿಸಿ ಬೃಹತ್ ತಪಾಸಣೆ ಆರಂಭಿಸಲಾಯಿತು. ಈ ವೇಳೆ 3,531 ಆಟೋಗಳ ತಪಾಸಣೆ ನಡೆದಿದ್ದು, ಪರ್ಮಿಟ್ ಇಲ್ಲದಿದ್ದು, ಇನ್ಶೂರೆನ್ಸ್ ಅಥವಾ ದಾಖಲೆಗಳಿಲ್ಲದ ಆಟೋಗಳ ಮೇಲೆ ಕೇಸ್ ದಾಖಲಾಗಿದ್ದು, 1,006 ಆಟೋಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಈ 1,006 ಕೇಸ್‌ಗಳಲ್ಲಿ 233 ಆಟೋಗಳನ್ನು ಅಧಿಕಾರಿಗಳು ನೇರವಾಗಿ ಸೀಜ್ ಮಾಡಿದ್ದಾರೆ. ವಿಶೇಷವೆಂದರೆ, ಈ ತಪಾಸಣೆಗೀಡಾದ ವಾಹನಗಳಲ್ಲಿ ಅತಿ ಹೆಚ್ಚು ಸಂಖ್ಯೆ ಆ್ಯಪ್ ಆಧಾರಿತ ಸೇವೆ ನೀಡುತ್ತಿರುವ ಆಟೋಗಳೇ. ಓಲಾ, ಊಬರ್, ರ‍್ಯಾಪಿಡೋ, ನಮ್ಮಯಾತ್ರಿ ಸೇರಿದಂತೆ ಇತರೆ ಆ್ಯಪ್‌ಗಳಿಗೆ ಸೇರಿದ ಆಟೋಗಳೆ ಹೆಚ್ಚು ದೂರುಗಳನ್ನ ಸ್ವೀಕರಿಸಿದೆ.
ಆ್ಯಪ್ ಆಧಾರಿತ ಆಟೋಗಳ ವಿರುದ್ಧ ಎಷ್ಟು ಕ್ರಮ?
ರ‍್ಯಾಪಿಡೋ: 92 ಕೇಸ್, 32 ಸೀಜ್
ಊಬರ್: 59 ಕೇಸ್, 14 ಸೀಜ್
ಓಲಾ: 35 ಕೇಸ್, 4 ಸೀಜ್
ನಮ್ಮಯಾತ್ರಿ: 25 ಕೇಸ್, 4 ಸೀಜ್
ಇತರೆ ಆ್ಯಪ್‌ಗಳು: 795 ಕೇಸ್, 179 ಸೀಜ್
ಬೆಂಗಳೂರು ಕೇಂದ್ರ ಭಾಗದಲ್ಲಿ 143 ಕೇಸ್ ದಾಖಲಾಗಿದ್ದು, 69 ಆಟೋಗಳ ಸೀಜ್ ನಡೆದಿದೆ. ಜ್ಞಾನಭಾರತಿ ವ್ಯಾಪ್ತಿಯಲ್ಲಿ 43 ಕೇಸ್‌ಗೆ 34 ಆಟೋಗಳು ಸೀಜ್ ಆಗಿವೆ. ದೇವನಹಳ್ಳಿಯಂತಹ ಹೊರವಲಯದಲ್ಲೂ 33 ಕೇಸ್ ದಾಖಲಾಗಿವೆ. ಎಲ್ಲೆಡೆ ಕಾರ್ಯಾಚರಣೆ ಭರ್ಜರಿಯಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಟಿಓ ಮೂಲಗಳು ತಿಳಿಸಿವೆ.