ಜುಲೈ 1 ರಿಂದ ಅನ್ನಭಾಗ್ಯ ಸಿಗುವುದು ಡೌಟ್‌: ಕಾರಣ ತಿಳಿಸಿದ ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಸರಕಾರದ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ (Annabhagya Scheme) ಜುಲೈ 1 ರಿಂದ ಜಾರಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಘೋಷಣೆ ಮಾಡಿದ್ದಾರೆ.

ಆದ್ರೆ ಇದೀಗ ರಾಜ್ಯಕ್ಕೆ 2.28 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯನ್ನು ಸರಬರಾಜು ಮಾಡುವಂತೆ ಫುಡ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (ಎಫ್‌ಸಿಐ)ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಕೇಂದ್ರ ಸರ್ಕಾರ ಮುರಿದು ಬೀಳುವಂತೆ ಮಾಡಿದೆ ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಐದು ಗ್ಯಾರಂಟಿಗಳಲ್ಲಿ ಒಂದು ಜಾರಿ ಮಾಡಿದ್ದೇವೆ. ಜನತೆಗೆ 10 ಕೆಜಿ ಅಕ್ಕಿಯನ್ನು ಕೊಡಲು ಮೊದಲ ಸಚಿವ ಸಂಪುಟದಲ್ಲಿಯೇ ತೀರ್ಮಾನ ಮಾಡಿದ್ದೇವೆ. ಅದಕ್ಕಾಗಿ ಒಟ್ಟು 2.28 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಹೆಚ್ಚುವರಿ ಬೇಕಾಗುತ್ತದೆ. ಎಫ್‌ಸಿಐಗೆ ನಮ್ಮ ರಾಜ್ಯದ ಅಧಿಕಾರಿಗಳು ಮಾತನಾಡಿದಾಗ ಎಫ್‌ಸಿಐ ಅಧಿಕಾರಿಗಳು ಅಕ್ಕಿ ಸರಬರಾಜು ಮಾಡುವುದಾಗಿ ಒಪ್ಪಿಕೊಂಡಿದ್ದರು. ನಾನು ಡೆಪುಟಿ ಜನರಲ್‌ ಮ್ಯಾನೇಜರ್‌ ಅವರನ್ನು ಕರೆದು ಮಾತನಾಡಿದಾಗ, ಇದು ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, ಪ್ರತಿ ತಿಂಗಳು ಅಕ್ಕಿ ತಪ್ಪದೇ ಕೊಡಬೇಕು ಎಂದು ಹೇಳಿದಾಗ ಅವರು ಒಪ್ಪಿಕೊಂಡಿದ್ದರು. ಕೇಂದ್ರದ ಒಪ್ಪಿಗೆ ಆಧಾರದಲ್ಲಿ ಜುಲೈ 1ರಿಂದ ಅಕ್ಕಿ ಕೊಡುತ್ತೇವೆ ಎಂದಿದ್ದೆವು. ಇದಾದ ಬಳಿಕ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಮತ್ತು ಎಫ್‌ಸಿಐ ಒಪ್ಪಂದದಂತೆ ಪ್ರತಿ ಕೆಜಿ ಅಕ್ಕಿಗೆ 34 ರೂ. ಬೆಲೆ ಹಾಗೂ 2 ರೂ.60 ಪೈಸೆ ಸರಬರಾಜು ವೆಚ್ಚ ಸೇರಿದಂತೆ 36 ರೂ.60 ಪೈಸೆಯಂತೆ ಅಕ್ಕಿ ಸರಬರಾಜು ಮಾಡಲು ಒಪ್ಪಿಕೊಂಡಿತ್ತು. ಇದಕ್ಕೆ ರಾಜ್ಯ ಸರ್ಕಾರಕ್ಕೆ ತಗಲುವ ವೆಚ್ಚ 840 ಕೋಟಿ ರೂ. ಆಗುತ್ತಿತ್ತು. ಒಂದು ವರ್ಷಕ್ಕೆ 10,092 ಕೋಟಿ ರೂ. ಖರ್ಚಾಗುತ್ತಿತ್ತು. ಜೂ.9ರಂದೇ ಫುಡ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (ಎಫ್‌ಸಿಐ)ಗೆ ರಾಜ್ಯ ಸರ್ಕಾರದಿಂದ ಪತ್ರವನ್ನು ಬರೆದಿದ್ದು, ಇದಕ್ಕೆ ಒಪ್ಪಿಕೊಂಡು ಅಕ್ಕಿ ಸರಬರಾಜು ಮಾಡುವುದಾಗಿ ಎಫ್‌ಸಿಐ ರಾಜ್ಯಕ್ಕೆ ಜೂ.12ರಂದು ಪತ್ರವನ್ನೂ ಬರೆದಿತ್ತು ಎಂದು ಹೇಳಿದರು.

ಆದರೆ, ಜೂ.13 ರಂದು ಆದರೆ ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ದೇಶದ ಯಾವುದೇ ರಾಜ್ಯಗಳಿಗೆ ಓಪೆನ್‌ ಮಾರ್ಕೆಟ್‌ ಸೇಲ್ಸ್‌ ಸ್ಕೀಮ್‌ ಡೊಮೆಸ್ಟಿಕ್‌ (ಒಎಂಎಸ್‌ಎಸ್‌) ಅಡಿಯಲ್ಲಿ ಅಕ್ಕಿ ಮತ್ತು ಗೋಧಿಗಳನ್ನು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ.

ಈ ಮೂಲಕ ಕರ್ನಾಟಕದ ಯೋಜನೆಯನ್ನು ವಿಫಲಗೊಳಿಸಲು ರಾಜಕೀಯ ಮಾಡಿದ್ದಾರೆ. ಈಗ ಅಕ್ಕಿ ಸರಬರಾಜು ಮಾಡುವುದಕ್ಕೆ ಆಗುವುದಿಲ್ಲವೆಂದು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಅಕ್ಕಿ ಕೊಡುವುದಕ್ಕೆ ಸಮಸ್ಯೆ ಎದುರಾಗಲಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!