ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಪತಿಯೇ ಡಂಬಲ್ಸ್‌ನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ದೆಹಲಿ ಪೊಲೀಸ್ ವಿಶೇಷ ಘಟಕದ ಸ್ವಾಟ್ ಕಮಾಂಡೋ ಆಗಿದ್ದ 27 ವರ್ಷದ ಕಾಜಲ್ ಚೌಧರಿ ಮೃತ ದುರ್ದೈವಿ.
ಸಾಯುವ ಮುನ್ನ ಕಾಜಲ್ ಕೊನೆಯ ಕರೆಯನ್ನು ತನ್ನ ಸಹೋದರನಿಗೆ ಮಾಡಿದ್ದರು. ಕರೆ ಮಾಡಿದಾಗ ಆಕೆಯ ಕಿರುಚಾಟವೇ ಕೇಳುತ್ತಿತ್ತು. ಕೂಡಲೇ ಫೋನ್ ಸಂಪರ್ಕವೇ ಕಡಿತಗೊಂಡಿತ್ತು ಎಂದು ಆಕೆಯ ಸಹೋದರ ಮಾಹಿತಿ ನೀಡಿದ್ದಾರೆ.
ಕಾಜಲ್ ಮತ್ತು ಅವರ ಪತಿ ಅಂಕುರ್ ಚೌಧರಿ ನಡುವೆ ಕೌಟುಂಬಿಕ ಸಮಸ್ಯೆಗಳ ಕುರಿತು ಜಗಳವಾದ ನಂತರ ಈ ಘಟನೆ ನಡೆದಿದೆ. ಮಹಿಳೆಯ ಕುಟುಂಬಸ್ಥರು ಆಕೆಯ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದಾರೆ.
2022ರಲ್ಲಿ ಕಾಜಲ್ ತಮ್ಮ ಪದವಿ ಪೂರ್ಣಗೊಳಿಸಿದರು. ಈ ಸಮಯದಲ್ಲಿ ಅವರು ಗನೌರ್‌ನ ಸಹ ನಿವಾಸಿ ಅಂಕುರ್ ಅವರನ್ನು ಭೇಟಿಯಾದರು. ಇಬ್ಬರೂ ಪರಸ್ಪರ ಪ್ರೀತಿಸಿ,ತಮ್ಮ ಕುಟುಂಬಗಳನ್ನು ಮನವೊಲಿಸಿ ವಿವಾಹವಾದರು. ಮದುವೆಗೆ ಮುಂಚಿತವಾಗಿ, ಕಾಜಲ್ 2023ರಲ್ಲಿ ದೆಹಲಿ ಪೊಲೀಸ್ ಕಮಾಂಡೋ ಆಗಿ ಆಯ್ಕೆಯಾದರು. ಅಂಕುರ್ ದೆಹಲಿಯಲ್ಲಿ ರಕ್ಷಣಾ ಸಚಿವಾಲಯದಲ್ಲಿ ಗುಮಾಸ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.
ಮದುವೆಯಾದ 15 ದಿನಗಳಲ್ಲಿ, ಅಂಕುರ್ ಕುಟುಂಬವು ಕಾರ್ ಮತ್ತು ವರದಕ್ಷಿಣೆಗಾಗಿ ಬೇಡಿಕೆ ಇಡಲು ಪ್ರಾರಂಭಿಸಿತು. ಕಾಜಲ್‍ಗೆ ನಿರಂತರವಾಗಿ ಕಿರುಕುಳ ನೀಡಿದ್ದರು. ಕೌಟುಂಬಿಕ ದೌರ್ಜನ್ಯದಿಂದಾಗಿ, ಕಾಜಲ್ 2024ರಲ್ಲಿ ದೆಹಲಿಗೆ ಸ್ಥಳಾಂತರಗೊಂಡರು. ಆದರೆ ಆಕೆಯ ಪತಿ ಹಣ ಮತ್ತು ಕಾರ್ ನೀಡುವಂತೆ ಒತ್ತಾಯಿಸುತ್ತಲೇ ಇದ್ದ ಮತ್ತು ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಜನವರಿ 22ರಂದು, ಅಂಕುರ್ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದ ಕಾಜಲ್ ಅವರ ಸಹೋದರ ನಿಖಿಲ್‌ಗೆ ಕರೆ ಮಾಡಿ, ತಾನೇ ಪತ್ನಿಯನ್ನು ಕೊಂದಿರುವುದಾಗಿ ಹೇಳಿದ್ದ. ಹಾಗೆಯೇ ಆಕೆಯ ಶವವನ್ನು ತೆಗೆದುಕೊಂಡು ಹೋಗಲು ಹೇಳಿದ್ದ ಎಂದು ಆರೋಪಿಸಲಾಗಿದೆ.
ತನ್ನ ಮಗಳು ನಾಲ್ಕು ತಿಂಗಳ ಗರ್ಭಿಣಿ ಎಂದು ಮೃತಳ ತಂದೆ ರಾಕೇಶ್ ಹೇಳಿದ್ದಾರೆ. ಅಂಕುರ್ ಎರಡು ಕೊಲೆಗಳನ್ನು ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಅತ್ತೆ-ಮಾವಂದಿರು ವರದಕ್ಷಿಣೆಗಾಗಿ ಕಾಜಲ್‌ಗೆ ಕಿರುಕುಳ ನೀಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ನಂತರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ರಾತ್ರಿ ಆರೋಪಿ ಪತಿ ಅಂಕುರ್‌ನನ್ನು ಬಂಧಿಸಲಾಯಿತು. ಆರಂಭದಲ್ಲಿ ಮೋಹನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಆದರೆ ಕಾಜಲ್ ಸಾವಿನ ನಂತರ ಇದೀಗ ಪತಿ ವಿರುದ್ಧ ಕೊಲೆ ಕೇಸ್ ದಾಖಲಿಸಲಾಗಿದೆ.



