ಅಂಬರೀಶ್ ಕನಸುಗಳ ಸಾಕಾರಗೊಳಿಸಲು ಡಾ. ಅಂಬರೀಶ್ ಫೌಂಡೇಷನ್ ಚಾರಿಟಿ ಟ್ರಸ್ಟ್‌ ಅಸ್ತಿತ್ವಕ್ಕೆ: ಸುಮಲತಾ

ಹೊಸ ದಿಗಂತ ವರದಿ , ಮಂಡ್ಯ :

ಅಂಬರೀಶ್ ಅವರ ಕನಸುಗಳನ್ನು ಸಾಕಾರಗೊಳಿಸುವ ಉದ್ದೇಶದಿಂದ ಡಾ. ಅಂಬರೀಶ್ ಫೌಂಡೇಷನ್ ಚಾರಿಟಿ ಟ್ರಸ್ಟ್‌ನ್ನು ಲೋಕಾರ್ಪಣೆ ಮಾಡಿದ್ದೇವೆ. ಇದರಿಂದೊಂದಿಗೆ ಅಂಬರೀಶ್ ಅವರ ಉದ್ದೇಶ, ಗುರಿಗಳನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

ನಗರದ ಸಂಜಯ ಚಿತ್ರಮಂದಿರದ ಆವರಣದಲ್ಲಿ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿ ಸಂಘದ ವತಿಯಿಂದ ಅಂಬರೀಶ್ ಅವರ ಸಂಸ್ಮರಣೆ, ಕನ್ನಡ ಹಬ್ಬ ಕಾರ‌್ಯಕ್ರಮ ಉದ್ಘಾಟಿಸಿ, ಅಭಿಷೇಕ್ ಅಂಬರೀಶ್ ನಟಿಸಿರುವ ಬ್ಯಾಡ್ ಮ್ಯಾನರ್ಸ್‌ ಚಿತ್ರ ವೀಕ್ಷಿಸಿದ ನಂತರ ಮಾತನಾಡಿದ ಅವರು, ಅಂಬರೀಶ್ ಅವರು ನಮ್ಮನ್ನು ಅಗಲಿ ಇಂದಿಗೆ ಐದು ವರ್ಷಗಳು ಕಳೆದಿವೆ. ಅವರಿಗೆ ಬಳಷ್ಟು ಕನಸುಗಳು, ಆಸೆಗಳು ಇದ್ದವು. ಅವುಗಳನ್ನು ನಾವು ಮುಂದುವರಿಸಿಕೊಂಡು ಹೋಗಲು ಟ್ರಸ್ಟ್‌ನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.

ಈ ಟ್ರಸ್ಟನ್ನು ಮಂಡ್ಯದಲ್ಲೇ ಲೋಕಾರ್ಪಣೆ ಮಾಡಬೇಕು ಎಂಬುದು ನಮ್ಮ ಆಸೆಯೂ ಆಗಿತ್ತು. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಟ್ರಸ್ಟ್‌ ಮೂಲಕ ಸಾಧಕರನ್ನು ಸನ್ಮಾನಿಸುವ ಮೂಲಕ ಟ್ರಸ್ಟ್‌ನ್ನು ಉದ್ಘಾಟಿಸಲಾಗಿದೆ ಎಂದು ಹೇಳಿದರು.

ಅಂಬರೀಶ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರು ಮಾಡಿರುವಂತಹ ಕಾರ‌್ಯಗಳು ನಮ್ಮ ನಡುವೆ ಜೀವಂತವಾಗಿದೆ. ಆದ್ದರಿಂದ ಅವರೂ ಸಹ ಜೀವಂತವಾಗಿದ್ದಾರೆ. ಅವರು ಗಳಿಸಿರುವ ಪ್ರೀತಿ, ವಿಶ್ವಾಸ, ಅಭಿಮಾನ ಎಂದೆಂದಿಗೂ ಶಾಶ್ವತವಾಗಿದೆ.
ಅಭಿಮಾನಿಗಳು ಅವರಿಗೆ ಗೌರವದಿಂದ ಕಲಿಯುಗ ಕರ್ಣ ಎಂದು ಬಿರುದು ನೀಡಿದ್ದಾರೆ. ಅದಕ್ಕೆ ಅವರು ಎಂದಿಗೂ ಅಪವಾದವಾಗದ ರೀತಿಯಲ್ಲಿ ಅವರ ಜೀವಮಾನದಲ್ಲೇ ನಡೆದುಕೊಂಡಿದ್ದಾರೆ. ಜಿಲ್ಲೆ ಸೇರಿದಂತೆ ರಾಜ್ಯದಲ್ಲೆಡೆ ಅವರು ನೀಡಿರುವ ಕೊಡುಗೆಗಳ ಬಗ್ಗೆ ನಾನು ಎಲ್ಲಿ ಹೋದರೂ ನೆನೆಯುವಂತಹ ಸ್ಥಿತಿಯನ್ನು ನಾನು ನೋಡಿದ್ದೇನೆ ಎಂದು ಉದಾಹರಣೆ ಸಮೇತ ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!