ದಿಗಂತ ವರದಿ ರಾಮನಗರ :
ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಸಿಕ್ಕಿದ್ರು, ಶುಭಾಶಯ ತಿಳಿಸಿದ್ದೇನೆ ಎಂದು ನಾಮಪತ್ರ ಸಲ್ಲಿಕೆ ಬಳಿಕ ಡಿ.ಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ್ದರಿಂದ ಬೆಂಗಳೂರು ಗ್ರಾಮಾಂತರಕ್ಷೇತ್ರದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಮಾತನಾಡಿದ ಡಿಕೆ ಸುರೇಶ್, ‘ಮೈತ್ರಿ ಅಭ್ಯರ್ಥಿ ಪರ ಅಮಿತ್ ಶಾ ರೋಡ್ ಶೋ ಮಾಡಿದ್ದು, ಅವರಿಗೆ ಕರ್ನಾಟಕದ ನಾಡಿಮಿಡಿತ ಗೊತ್ತಿಲ್ಲ. ಅದಕ್ಕೆ ಬಂದು ಏನೇನೋ ಹೇಳಿ ಹೋಗಿದ್ದಾರೆ. ಆದರೆ, ನನಗೆ ನಮ್ಮ ಜನರ ನಾಡಿಮಿಡಿತ ಗೊತ್ತು. ನಮ್ಮ ಗೆಲುವು ನಿಶ್ಚಿತ ಎಂದರು. ಇದೇ ವೇಳೆ ಇವತ್ತು ಒಳ್ಳೆಯ ಘಳಿಗೆ ಹಾಗಾಗಿ ನಾಮಪತ್ರ ಸಲ್ಲಿಸಿರುವುದಾಗಿ ಹೇಳಿದರು.
ಸುರೇಶ್ ಕಾರಿಗೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮುತ್ತಿಗೆ
ಇನ್ನು ರಾಮನಗರ ಡಿಸಿ ಕಚೇರಿಯಿಂದ ತೆರಳುವಾಗ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಹಾಗೂ ಶಾಸಕ ಇಕ್ಬಾಲ್ ಕಾರಿಗೆ ಮೋದಿ ಮೋದಿ ಎಂದು ಘೋಷಣೆ ಕೂಗುತ್ತ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಕೂಡಲೇ ಎಚ್ಚೆತ್ತ ಪೊಲೀಸ್ ಸಿಬ್ಬಂದಿ, ಕಾರ್ಯಕರ್ತರನ್ನು ಚದುರಿಸಿದರು. ನಂತರ ಡಿ.ಕೆ.ಸುರೇಶ್ ಕಾರು ಮುಂದೆ ತೆರಳಲು ಪೊಲೀಸರು ಅನುವು ಮಾಡಿಕೊಟ್ಟರು.
ಇನ್ನು ರಾಮನಗರದಲ್ಲಿ ಶಾಸಕ ಡಾ.C.N ಅಶ್ವಥ್ ನಾರಾಯಣ್ ಮಾತನಾಡಿ, ‘ಬೆಂಗಳೂರು ಗ್ರಾಮಾಂತರ ಕ್ಷೇತ್ರವು ಇಡೀ ದೇಶದ ಗಮನ ಸೆಳೆದಿದೆ. ಚುನಾವಣೆಯಲ್ಲಿ ಡಾ.ಸಿ.ಎನ್.ಮಂಜುನಾಥ್ಗೆ ಮತ ಕೊಡುವುದು, ಪ್ರಧಾನಿ ಮೋದಿ, ದೇವೇಗೌಡರಿಗೆ ಮತ್ತು ಕುಮಾರಣ್ಣರಿಗೆ ಕೊಟ್ಟಂತೆ. ಬೆಂಗಳೂರು ಗ್ರಾಮಾಂತರದ ಅಭಿವೃದ್ಧಿಗೆ ಜನ ಮತ ಕೊಡುತ್ತಾರೆ. ಲೋಕಸಭಾ ಚುನಾವಣೆ ಜನರ ಪ್ರತಿಷ್ಠೆ, ನಮ್ಮ ವೈಯಕ್ತಿಕ ಪ್ರತಿಷ್ಠೆ ಅಲ್ಲ. ಮೋದಿ ದೇಶದ ಜನರ ವಿಶ್ವಾಸ ಗಳಿಸಿದ ರೀತಿ ಮಂಜುನಾಥ್ ಗಳಿಸಿದ್ದಾರೆ. ಜಾತ್ಯಾತೀತ, ಧರ್ಮಾತೀತ ವಿಶ್ವಾಸವನ್ನ ಅವರು ಗಳಿಸಿದ್ದಾರೆ. ಈ ಲೋಕಸಭಾ ಚುನಾವಣೆ ಹಣ ಶಕ್ತಿಯೋ, ಜನಶಕ್ತಿಯೋ ಎಂಬಂತಿದೆ ಎಂದು ಹೇಳಿದರು.