ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ‘ನಾಲಾಯಕ್ ಗೃಹಮಂತ್ರಿ’ ಎಂದು ಕರೆದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಸೋಮವಾರ ಒತ್ತಾಯಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ, ಸಚಿವರು ಮತ್ತು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹಿಂದೆ, ಬಿಹಾರದಲ್ಲಿ ಪ್ರತಿನಿತ್ಯ ಅಪರಾಧ ನಡೆಯುತ್ತಿದೆ ಎಂದು ದಕ್ಷಿಣದಲ್ಲಿ ನಾವು ಕುಳಿತು ಮಾತನಾಡುತ್ತಿದ್ದೆವು. ಈಗ ಬಿಹಾರದಲ್ಲಿ ಶಾಂತಿ ನೆಲೆಸಿದೆ. ಕರ್ನಾಟಕದಲ್ಲಿ ಪ್ರತಿನಿತ್ಯ ಒಂದು- ಎರಡು, ಮೂರು ನಾಲ್ಕು ಎಂಬ ರೀತಿಯಲ್ಲಿ ಕೊಲೆ ನಡೆಯುತ್ತಿದೆ. ಕರ್ನಾಟಕದಲ್ಲಿ ರಾಜ್ಯ ಸರಕಾರ ಬದುಕಿದೆಯೇ ಅಥವಾ ಸತ್ತಿದೆಯೇ ಎಂಬ ಸಂಶಯ ಕೇವಲ ನಮ್ಮ ರಾಜ್ಯದ ಜನರಿಗೆ ಅಲ್ಲ, ನಾವು ಯಾವ ರಾಜ್ಯಕ್ಕೆ ಹೋದರೂ ಕೂಡ ‘ನಿಮ್ಮ ರಾಜ್ಯಕ್ಕೆ ಏನಾಗಿದೆ?’ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಸಿದ್ದರಾಮಯ್ಯನವರ ಸರಕಾರ ಯಾವಾಗ ಆಡಳಿತಕ್ಕೆ ಬರುತ್ತದೋ, ಕರ್ನಾಟಕ ರಾಜ್ಯದಲ್ಲಿ ಅಪರಾಧಿಗಳ ಕೈ ಮೇಲಾಗುತ್ತದೆ ಎಂದು ಟೀಕಿಸಿದರು.