ಆರ್.ಎಸ್.ಎಸ್,ವಿಎಚ್‌ಪಿಯಲ್ಲಿ ಹಲವು ಜವಾಬ್ದಾರಿ ನಿಭಾಯಿಸಿದ್ದ ಡಾ. ಗೋ.ಹ. ನರೇಗಲ್ ನಿಧನ

ಹೊಸದಿಗಂತ ವರದಿ ಹುಬ್ಬಳ್ಳಿ:

ಇಲ್ಲಿಯ ಗೋಕುಲ ರಸ್ತೆ ವಾಸವಿ ನಗರದ ನಿವಾಸಿ ಗೋವಿಂದ ನರೇಗಲ್ಲ(91) ಅವರು ಮಂಗಳವಾರ ಬೆಳಿಗ್ಗೆ 9:30 ಕ್ಕೆ ಸ್ವಗೃಹದಲ್ಲಿ ನಿಧನರಾದರು.

ಮೃತರಿಗೆ ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವಿದೆ. ಇವರ ಅಂತ್ಯಕ್ರಿಯೆ ಮಧ್ಯಾಹ್ನ 2:30ಕ್ಕೆ ನಗರದ ಹೆಗ್ಗೇರಿ ರುದ್ರಭೂಮಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಹಿರಿಯರು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಜರುಗಿತು.

ಹಿರಿಯರಾದ ಗೋವಿಂದ ನರೇಗಲ್ ಅವರು ಡಾ. ಗೋ.ಹ. ನರೇಗಲ್ ಎಂದು ಎಲ್ಲರಿಗೂ ಚಿರಪರಿಚಿತರಾಗಿದ್ದರು. ಕಳೆದ 60 ವರ್ಷದ ಹಿಂದಯೇ ವೈದ್ಯಕೀಯ ವೃತ್ತಿ ಆರಂಭಿಸಿದ್ದ ಅವರು ಹುಬ್ಬಳ್ಳಿಯಲ್ಲಿ ತಮ್ಮದೇ ಆದ ಜನಪ್ರಿಯತೆ ಗಳಿಸಿದ್ದರು. ಸಾಮಾಜಿಕ ಕಳಕಳಿ ಹಾಗೂ ರಾಷ್ಟ್ರೀಯತೆ ಮೇಲೆ ಅಪಾರ ಗೌರವ ಹೊಂದಿದ್ದ ಅವರು, ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಾನಗರ ಸಂಘಚಾಲಕ, ವಿಶ್ವ ಹಿಂದೂ ಪರಿಷತನ ಕರ್ನಾಟಕ ಉತ್ತರ ಪ್ರಾಂತ ಕಾರ್ಯಾಧ್ಯಕ್ಷ ಸೇರಿದಂತೆ ಹಲವಾರು ಜವಾಬ್ದಾರಿ ನಿಭಾಯಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾದರು ಹಿಂದೂ ಸಮಾಜದ ಸಂಘಟನೆ, ಸಮಾಜ ಸೇವೆ, ಕಿರಿಯ ಕಾರ್ಯಕರ್ತರಿಗೆ ಪ್ರೇರಣೆದಾಯಿ ಯಾಗಿದ್ದರು. ತಮಿಳುನಾಡಿನ ಮೀನಾಕ್ಷಿಪುರಂ ನಲ್ಲಿ ಹಿಂದೂಗಳ ಸಾಮೂಹಿಕವಾಗಿ ಇಸ್ಲಾಂಗೆ ಮತಾಂತರವಾದ ಸುದ್ದಿ ತಿಳಿದು, ತಡೆಯಲು ಪತ್ರದ ಮೂಲಕ ಅಂದಿನ ಪ್ರಧಾನಿ ಇಂದಿರಾ ಗಾಂಽ ಅವರ ಗಮನ ಸೆಳೆದಿದ್ದರು.

ಮತಾಂತರ ಆದ ಎಷ್ಟೋ ಹಿಂದೂಗಳ ಮನ ಪರಿವರ್ತನೆ ಮಾಡುವ ಮೂಲಕ ಮಾತೃ ಧರ್ಮಕ್ಕೆ ತರುವ ಕಾರ್ಯ ಮಾಡಿದ್ದರು. ಕೇವಲ ಪರಿವರ್ತನೆ ಅಷ್ಟೇ ಅಲ್ಲದೇ, ಅವರ ಕಷ್ಟ ಸುಖ, ಮದುವೆ ಮುಂತಾದ ಸಮಾರಂಭಗಳಲ್ಲಿ ಭಾಗಿಯಾಗಿ ಮುಂದೆ ನಿಂತು ನೆರವೇರಿಸುತಿದ್ದರು. ಹುಬ್ಬಳ್ಳಿಯಲ್ಲಿ ಒಂದು ಪೀಳಿಗೆಯ ಸಂಘದ ಸ್ವಯಂಸೇವಕರು ಅವರ ಮಾರ್ಗದರ್ಶನದಲ್ಲಿ ಬೆಳೆದರು. ಇವರ ಮಾತುಗಳಿಗೆ ಇಡೀ ನಗರದಲ್ಲಿ ಒಂದು ವಿಶೇಷ ತೂಕ ಇರುತ್ತಿತ್ತು.

ಇಳಿವಯಸ್ಸಿನಲ್ಲೂ ಸಹಾಯಕರೊಡನೆ ಸಂಜೆ ಕೇಶವ ಕುಂಜದಲ್ಲಿ ಪ್ರತಿನಿತ್ಯ ಕಾಣಿಸಿಕೊಳ್ಳುತ್ತಿದ್ದರು. ಅಲ್ಲಿ ಬರುವ ಹಿರಿಯ-ಕಿರಿಯ ಸ್ವಯಂಸೇವಕರಿಗೆ ಮಾರ್ಗದರ್ಶನ ಸೇರಿದಂತೆ ಹತ್ತು ಹಲವು ಅನುಭಗಳ ಹಂಚಿಕೊಳ್ಳುತ್ತಿದ್ದರು. ಮೃತರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ, ವಿಶ್ವ ಹಿಂದೂಪರಿಷತ್‌ನ ಹಿರಿಯರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಜಗದೀಶ ಶೆಟ್ಟರ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!