ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಾ. ವಿಷ್ಣುವರ್ಧನ್ ಅವರ ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಿದ್ದ ಸಮಾಧಿಯನ್ನು ತೆರವುಗೊಳಿಸಿದ ವಿಚಾರವಾಗಿ ಅವರ ಅಳಿಯ ನಟ ಅನಿರುದ್ಧ್ ಅವರು ಬೆಂಗಳೂರಿನ ಜಯನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಸಭೆ ನಡೆಸಿದರು.
ಈ ವೇಳೆ ಅನಿರುದ್ಧ ಸಮಾಧಿ ಇರುವ ಜಾಗದಲ್ಲಿ ಅಸ್ಥಿ ಇಲ್ಲ ಎಂದು ಸ್ಪಷ್ಟನೆ ನೀಡಿ ಮೈಸೂರಿನಲ್ಲೇ ಸ್ಮಾರಕ ನಿರ್ಮಾಣ ಮಾಡ್ತಿವಿ ಎಂದು ಒತ್ತಿ ಹೇಳಿದ್ದಾರೆ.
ವಿಷ್ಣುವರ್ಧನ್ ಅವರ ಅಂತಿಮ ಸಂಸ್ಕಾರದ ದಿನ ನಡೆದ ಘಟನೆಗಳ ಬಗ್ಗೆ ವಿವರಿಸುತ್ತಾ ಅನಿರುದ್ಧ್ , ಹಿಂದೆ ಸಮಾಧಿ ಇದ್ದ ಜಾಗದಲ್ಲಿ ಅಸ್ಥಿ ಇರಲಿಲ್ಲ. ಅಲ್ಲಿ ಒಂದು ಚೆಂಬು ಇಟ್ಟಿದ್ದೇವೆ ಅಂತ ಹೇಳಲಾಗಿತ್ತು. ಆದರೆ ನಿಜದಲ್ಲಿ ಅಲ್ಲಿ ಏನೂ ಇರಲಿಲ್ಲ. ನನ್ನ ಅಮ್ಮ (ಭಾರತಿ ವಿಷ್ಣುವರ್ಧನ್) ಅವರು ಆಸ್ತಿಯನ್ನು ಸುರಕ್ಷಿತವಾಗಿ ಸಂರಕ್ಷಿಸಿದ್ದರು. ಕೊನೆಗೆ ಒಂದು ಚೊಂಬಲ್ಲಿ ಉಳಿಸಿಕೊಂಡು, ಉಳಿದುದನ್ನು ನದಿಗೆ ಬಿಡಲಾಯಿತು. ಇಂದಿಗೆ ಆ ಅಸ್ಥಿ ಮೈಸೂರಿನ ಸ್ಮಾರಕದಲ್ಲಿರುವ ಪುತ್ಥಳಿಯ ಕೆಳಗೆ ಇದೆ ಎಂದರು.
ಈ ವೇಳೆ ಕಿಚ್ಚ ಸುದೀಪ್ ಗೆ ಜಾಗ ಖರೀದಿಸುತ್ತೇನೆ ಅಂದಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡುತ್ತಾ, ಹೆಸರು ಹೇಳದೆಯೇ, ಯಾರೋ ಜಾಗ ತಗೊಂಡು ಅಭಿಮಾನ್ ಸ್ಟುಡಿಯೋದಲ್ಲಿ ಮತ್ತೆ ಸಮಾಧಿ ಮಾಡ್ತೀವಿ ಅಂತಿದಾರೆ. ಆರು ವರ್ಷ ನಾವೇ ಪ್ರಯತ್ನ ಮಾಡಿದ್ದೇವೆ. ಅವರ ಪ್ರಯತ್ನದಿಂದ ಆದರೆ ತುಂಬಾ ಸಂತೋಷ. ರಾಜ್ಯ ಸರ್ಕಾರವೇ ಇದರ ಜೊತೆ ನಿಂತಿದೆ. ಬಾಲಣ್ಣ ಅವರ ಮಗ ವಾಹಿನಿ ಮುಂದೆ ಕೂತು ಕೆಟ್ಟ ಕೆಟ್ಟದಾಗಿ ಮಾತಾಡಿದ್ರು, ಅದರಿಂದ ಬೇಜಾರಾಗಿ ಅವ್ರು 2016ರಿಂದ ಜಾಗಕ್ಕೆ ಕಾಲಿಡಲ್ಲ ಅಂದ್ರು, ಅವತ್ತು ಬೇಜಾರಾಗಿ ಅದನ್ನು ಅಲ್ಲಿಂದ ತೆಗಿಸಿ ಬಿಡಬಹುದಿತ್ತು. ಆದರೆ ನಾವು ಅಭಿಮಾನಿಗಳಿಗಾಗಿ ಅದನ್ನು ತೆಗೆಸಲಿಲ್ಲ. ಒಂಭತ್ತು ವರ್ಷ ಆಯ್ತು, ಯಾಕೆ ಯಾರೂ ಇನ್ನೂ ಅದನ್ನು ಖರೀದಿಸಲಿಲ್ಲ? ಯಾರಾದರೂ ಮಾಡ್ತೀವಿ ಅಂತ ಹೇಳಬಹುದೇನೋ. ಆದರೆ ಅದು ರಾಜ್ಯಸಭೆಯಲ್ಲಿ ಪಾಸ್ ಆಗಬೇಕಲ್ಲ ಎಂದರು
ಅಭಿಮಾನ ಸ್ಟುಡಿಯೋ ಜಾಗ ಸರ್ಕಾರಿ ಭೂಮಿ. ನಮಗೆ ಅದರಿಂದ ಒಂದು ರೂಪಾಯಿಯೂ ಲಾಭವಾಗುವುದಿಲ್ಲ. ವ್ಯಾಪಾರೀಕರಣ ಅಂತ ಹೇಳುವವರು ತಪ್ಪಾಗಿ ಪ್ರಚಾರ ಮಾಡುತ್ತಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ ಸರ್ಕಾರವೇ ಹಣ ನೀಡಿದೆ. ನಮ್ಮ ಕುಟುಂಬಕ್ಕೆ ಹತ್ತು ಲಕ್ಷ ಬರುತ್ತದೆ ಅಂತ ಕೆಲವರು ಹೇಳುತ್ತಾರೆ. ಅದು ಸಂಪೂರ್ಣ ಸುಳ್ಳು ಎಂದರು.