ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೃಹ ಸಚಿವ ಜಿ. ಪರಮೇಶ್ವರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಬೇಕು ಎಂಬ ವೈಯಕ್ತಿಕ ಆಸೆ ನನಗಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿ. ಸೋಮಣ್ಣ ಅವರು ಬಹಿರಂಗವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ತುಮಕೂರಿನ ಹೆಗ್ಗೆರೆಯಲ್ಲಿ ರೇಲ್ವೆ ಮೇಲ್ಸೇತುವೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದ ಬಳಿಕ ವೇದಿಕೆಯ ಮೇಲೆ ಮಾತನಾಡುತ್ತಿದ್ದ ಸೋಮಣ್ಣ, ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಉಲ್ಲೇಖಿಸಿ, “ಪರಮೇಶ್ವರ್ ಅವರು ಅದೃಷ್ಟದ ಗೃಹ ಮಂತ್ರಿಯಾಗಿದ್ದಾರೆ. ಎಲ್ಲೋ ಒಂದು ಕಡೆ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಅನ್ನೋ ಆಸೆ ಇದೆ. ಇದನ್ನ ನಾನೊಬ್ಬನೇ ಹೇಳುತ್ತಿಲ್ಲ, ತುಮಕೂರಿನ ಮಹಾಜನತೆಯ ಅಭಿಪ್ರಾಯ ಕೂಡಾ ಅದೇ ಆಗಿದೆ” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಾಸಕ ಸುರೇಶ್ ಗೌಡ ಅವರು ಮಧ್ಯ ಪ್ರವೇಶಿಸಿ, ಡಿ.ಕೆ. ಶಿವಕುಮಾರ್ ಕೂಡಾ ಇದ್ದಾರೆ ಎಂದಾಗ, ಅದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, “ಹಣೆಬರಹ ಯಾರಿಗೆ ಗೊತ್ತು? ಹಣೆಬರಹದಂತೆ ಆಗಲಿ” ಎಂದು ಮಾರ್ಮಿಕವಾಗಿ ನುಡಿದರು.
ಇದೇ ವೇದಿಕೆಯಲ್ಲಿ ವಿ. ಸೋಮಣ್ಣ ಅವರು ಮತ್ತೊಂದು ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡರು. ಕಳೆದ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಹಕರಿಸಿದಷ್ಟೇ ಪ್ರಮಾಣದಲ್ಲಿ ಕಾಂಗ್ರೆಸ್‌ನ ಬಹುಕಾಲದ ನಾಯಕರು ಸಹ ಸಾಥ್ ನೀಡಿದ್ದಾರೆ ಎಂದು ಹೇಳುವ ಮೂಲಕ ರಾಜಕೀಯ ರಹಸ್ಯವನ್ನು ಬಿಚ್ಚಿಟ್ಟರು.
ಅಂದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುದ್ದಹನುಮೇಗೌಡರ ಸೋಲಿಗೆ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದೊಳಗಿನ ನಾಯಕರೇ ಕಾರಣ ಎಂಬ ಗಂಭೀರ ಸಂಗತಿಯನ್ನು ಗೃಹ ಸಚಿವ ಜಿ. ಪರಮೇಶ್ವರ್ ಅವರೇ ಉಪಸ್ಥಿತರಿದ್ದ ವೇದಿಕೆಯಲ್ಲೇ ವಿ. ಸೋಮಣ್ಣ ಅವರು ಬಹಿರಂಗಪಡಿಸಿದರು.

