October 31, 2026
Saturday, October 31, 2026
spot_img

172 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದ ‘ದೃಶ್ಯಂ: ದಿ ಕನ್‌ಕ್ಲೂಷನ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷಿತ ‘ದೃಶ್ಯಂ: ದಿ ಕನ್‌ಕ್ಲೂಷನ್’ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಬಿಡುಗಡೆಯಾದ ಮೂರೇ ದಿನಕ್ಕೆ ಧೂಳೆಬ್ಬಿಸಿದೆ. ಮೂರನೇ ದಿನವಾದ ಭಾನುವಾರ ಸುಮಾರು 59 ಕೋಟಿ ರೂಪಾಯಿ ಗಳಿಕೆ ಕಾಣುವ ಮೂಲಕ, ತನ್ನ ಮೊದಲ ವಾರಾಂತ್ಯದ ಒಟ್ಟು ಕಲೆಕ್ಷನ್ ಅನ್ನು ಬರೋಬ್ಬರಿ 172 ಕೋಟಿ ರೂಪಾಯಿ ತಲುಪಿದೆ.

ಬಾನುವಾರ ಒಂದೇ ದಿನ ಈ ಸಿನಿಮಾ 59 ಕೋಟಿ ಬಾಚಿಕೊಂಡು ತನ್ನ ಅಧಿಪತ್ಯ ಮೆರೆದಿದೆ. ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಮೂರನೇ ‘ಫಸ್ಟ್ ವೀಕೆಂಡ್’ ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಪ್ರಸ್ತುತ ಈ ಪಟ್ಟಿಯಲ್ಲಿ ‘ಧುರಂಧರ್: ದಿ ರಿವೇಂಜ್’ (283.50 ಕೋಟಿ) ಹಾಗೂ ‘ಜವಾನ್’ (177.50 ಕೋಟಿ) ಮೊದಲ ಎರಡು ಸ್ಥಾನದಲ್ಲಿದ್ದರೆ, ‘ದೃಶ್ಯಂ’ ಮೂರನೇ ಸ್ಥಾನಕ್ಕೇರಿದೆ.

ಶನಿವಾರಕ್ಕೆ ಹೋಲಿಸಿದರೆ ಭಾನುವಾರ ಈ ಚಿತ್ರದ ಗಳಿಕೆಯಲ್ಲಿ ಶೇಕಡಾ 10 ರಿಂದ 15 ರಷ್ಟು ಭಾರಿ ಏರಿಕೆ ಕಂಡುಬಂದಿದೆ. ಉತ್ತರ, ಮಧ್ಯ ಮತ್ತು ಪೂರ್ವ ಭಾರತದ ಪ್ರದೇಶಗಳು ಹಾಗೂ ಗುಜರಾತ್‌ನಲ್ಲಿ ಶನಿವಾರ ಕೊಂಚ ಇಳಿಕೆ ಕಂಡಿತ್ತಾದರೂ, ಭಾನುವಾರ ಪ್ರೇಕ್ಷಕರು ಚಿತ್ರಮಂದಿರಗಳತ್ತ ಹರಿದುಬಂದಿದ್ದಾರೆ. ಕೆಲವು ಕೇಂದ್ರಗಳಲ್ಲಂತೂ ಮೊದಲ ದಿನಕ್ಕಿಂತಲೂ ಹೆಚ್ಚಿನ ಕಲೆಕ್ಷನ್ ದಾಖಲಾಗಿದೆ.

ಅಜಯ್ ದೇವಗನ್ ಕರಾವಳಿ ಅಥವಾ ಮರಾಠಿ ಶೈಲಿಯ ಪಾತ್ರಗಳಲ್ಲಿ ಕಾಣಿಸಿಕೊಂಡಾಗಲೆಲ್ಲಾ ಮಹಾರಾಷ್ಟ್ರದ ಪ್ರೇಕ್ಷಕರು ಬಿಗ್ ಥಂಬ್ಸ್ ಅಪ್ ನೀಡುತ್ತಾರೆ. ‘ಸಿಂಗಂ’, ‘ತಾನಾಜಿ’ ಚಿತ್ರಗಳಂತೆ ಈಗ ‘ದೃಶ್ಯಂ’ನ ವಿಜಯ್ ಸಾಲ್ಗಾಂವ್ಕರ್ ಪಾತ್ರಕ್ಕೂ ಮಹಾರಾಷ್ಟ್ರದಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಆರಂಭದ ದಿನಕ್ಕಿಂತಲೂ ಭಾನುವಾರದ ಕಲೆಕ್ಷನ್ ಇಲ್ಲಿ ದಾಖಲೆ ಮಟ್ಟಕ್ಕೆ ಏರಿದ್ದು, ಇಡೀ ದೇಶದಲ್ಲೇ ಮಹಾರಾಷ್ಟ್ರವೇ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ಚಿತ್ರರಂಗದ ವಿಶ್ಲೇಷಕರ ಪ್ರಕಾರ ‘ದೃಶ್ಯಂ: ದಿ ಕನ್‌ಕ್ಲೂಷನ್’ ಈಗಾಗಲೇ ಬ್ಲಾಕ್‌ಬಸ್ಟರ್ ಪಟ್ಟಕ್ಕೆ ಸೇರಿದೆ. ಆದರೆ ಇದು ಸಾರ್ವಕಾಲಿಕ ಮಹಾನ್ ದಾಖಲೆಗಳನ್ನು ಮುರಿಯಲಿದೆಯೇ ಎಂಬುದು ಈ ವಾರದ ಕೆಲಸದ ದಿನಗಳ ಗಳಿಕೆಯ ಮೇಲೆ ಆಧಾರಿತವಾಗಿದೆ.

Must Read