Tuesday, November 25, 2025

ದೆಹಲಿಯಲ್ಲಿ ಡ್ರಗ್ಸ್ ಬೇಟೆ: ಆಪರೇಷನ್ ಕ್ರಿಸ್ಟಲ್ ಫೋರ್ಟ್ರೆಸ್; 262 ಕೋಟಿಯ ಮೆಥಾಂಫೆಟಮೈನ್ ಜಪ್ತಿ, ಇಬ್ಬರು ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿಯಲ್ಲಿ ಮಾದಕ ವಸ್ತುಗಳ ಅತಿದೊಡ್ಡ ಜಪ್ತಿ ಪ್ರಕರಣ ಬೆಳಕಿಗೆ ಬಿದ್ದಿದ್ದು, ಎನ್‌ಸಿಬಿ ಮತ್ತು ದೆಹಲಿ ಪೊಲೀಸರು ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಅಪಾರ ಪ್ರಮಾಣದ ಮೆಥಾಂಫೆಟಮೈನ್ ವಶಕ್ಕೆ ಪಡೆದುಕೊಂಡಿದ್ದಾರೆ. ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ದೆಹಲಿ ಸುತ್ತಮುತ್ತ ನಡೆದ ದಾಳಿಗಳಲ್ಲಿ ಸುಮಾರು 262 ಕೋಟಿ ರೂ. ಮೌಲ್ಯದ 328 ಕೆಜಿ ಮೆಥ್ ಪತ್ತೆಯಾಗಿದೆ. ಛತ್ತರ್ಪುರದ ತೋಟದ ಮನೆಯೊಂದರಲ್ಲಿ ನಡೆದ ಶೋಧನೆಯಲ್ಲಿ ಅತ್ಯಧಿಕ ಪ್ರಮಾಣದ ಮಾದಕ ವಸ್ತು ಸಿಕ್ಕಿದ್ದು, ಕಾರ್ಯಾಚರಣೆ ದೊಡ್ಡ ಜಾಲದತ್ತ ದಾರಿ ತೋರಿಸಿದೆ.

ಈ ಪ್ರಕರಣದಲ್ಲಿ ನಾಗಾಲ್ಯಾಂಡ್ ಮೂಲದ ಎಸ್ತರ್ ಕಿನಿಮಿ ಹಾಗೂ ನೋಯ್ಡಾದ 25 ವರ್ಷದ ಶೇನ್ ವಾರಿಸ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ವಾರಿಸ್ ನಕಲಿ ಸಿಮ್‌ಕಾರ್ಡ್‌ಗಳಿಂದ ಹಿಡಿದು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮುಖೇನ ವಿದೇಶಿ ಮೂಲದ ಕಿಂಗ್‌ಪಿನ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣೆಯಲ್ಲಿ ವಾರಿಸ್ ನೀಡಿದ ಮಾಹಿತಿಯ ಮೇರೆಗೆ ಛತ್ತರ್ಪುರ ಎನ್‌ಕ್ಲೇವ್‌ನಲ್ಲಿ ದಾಳಿ ನಡೆಸಲಾಗಿದ್ದು, ಅಲ್ಲಿ ಉತ್ತಮ ಗುಣಮಟ್ಟದ ಮೆಥಾಂಫೆಟಮೈನ್ ಸಂಗ್ರಹಿಸಿರುವುದು ಪತ್ತೆಯಾಗಿದೆ.

ಎನ್‌ಸಿಬಿ ‘ಆಪರೇಶನ್ ಕ್ರಿಸ್ಟಲ್ ಫೋರ್ಟ್ರೆಸ್’ ಎಂದು ಹೆಸರಿಟ್ಟಿರುವ ಈ ವಿಶೇಷ ಕಾರ್ಯಾಚರಣೆಯ ಮೂಲಕ ಮಾದಕ ವಸ್ತುಗಳ ಅಕ್ರಮ ಸಾಗಣೆ ಮತ್ತು ಉತ್ಪಾದನಾ ಜಾಲವನ್ನು ದೇಶಾದ್ಯಂತ ನಿರ್ಮೂಲಪಡಿಸುವ ಗುರಿ ಹೊಂದಿದೆ.

error: Content is protected !!