ಹೊಸದಿಗಂತ ವರದಿ ಮಡಿಕೇರಿ:
ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 8 ಮಂದಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್.ಶಿವರುದ್ರಪ್ಪ ಹಾಗೂ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ಸಂಗ್ರಹಿಸಿದ ಮಾಹಿತಿಯನ್ವಯ ವೀರಾಜಪೇಟೆ ಸಮೀಪದ ಕದನೂರು- ನಾಪೋಕ್ಲು ರಸ್ತೆ ಜಂಕ್ಷನ್ ಬಳಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ದೊರಕಿತ್ತು.
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಅರೆಕಾಡುವಿನ ರಶೀದ್ (23), ಒಂಟಿಯಂಗಡಿಯ ಹೆಚ್.ಆರ್.ಸುದೀಶ್ (23), ಮೈಸೂರು ಕೆಸಿಪಿ ಕಾಲೋನಿಯ ಇಮ್ರಾನ್ ಖಾನ್ (35), ಮುತ್ತಾರುಮುಡಿಯ ಎಂ.ಪ್ರಕಾಶ್( 24),ಚೇರಂಬಾಣೆಯ ಹೆಚ್.ಎಂ.ಶಾಂತಕುಮಾರ್, (27) ಕಡಗದಾಳುವಿನ ಎಸ್.ಎಂ.ಸಜೀರ್ (37) ಎಂ.ಇನಿಯಾಜ್ (35) ಮೈಸೂರು ಶಾಂತಿ ನಗರದ ಇಮ್ರಾನ್ ಖಾನ್ (46) ಎಂಬವರನ್ನು ಬಂಧಿಸಿ 1 ಕೆ.ಜಿ 243 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ.