ಹೊಸದಿಗಂತ ವರದಿ, ಮಡಿಕೇರಿ:
ವೀರಾಜಪೇಟೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು ವೀರಾಜಪೇಟೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಿದ್ದಾಪುರ ಗೂಡುಗದ್ದೆಯಎನ್.ಪಿ.ಧನುಷ್ (19) ಕಣ್ಣಂಗಾಲದ ಎನ್.ಸಿ.ಭರತ್ (21)/ಹೆಚ್.ಆರ್.ಲಿಖಿತ್ (24) ಎಂದು ಗುರುತಿಸಲಾಗಿದ್ದು, ಆರೋಪಿಗಳಿಂದ 1 ಕೆ.ಜಿ 26 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬ ಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಡಿಕೇರಿ ಡಿವೈಎಸ್ ಪಿ ಎಂ. ಜಗದೀಶ್, ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್.ಶಿವರುದ್ರಪ್ಪ, ವೀರಾಜಪೇಟೆ ನಗರ ಠಾಣಾಧಿಕಾರಿ ಸಿ.ವಿ.ಶ್ರೀಧರ್ ಹಾಗೂ ಸಿಬ್ಬಂದಿಗಳು ಮತ್ತು ಡಿಸಿಆರ್‌ಬಿ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಬುಧವಾರ ವೀರಾಜಪೇಟೆಯ ಚಿಕ್ಕಪೇಟೆ ರಸ್ತೆ ಬಳಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ಈ ತಂಡ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಹಿತ ಬಂಧಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ತಿಳಿಸಿದ್ದಾರೆ.