ಹೊಸದಿಗಂತ, ಮಡಿಕೇರಿ:
ನಿಷೇಧಿತ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪ ಸಾಕ್ಯಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾ ನ್ಯಾಯಾಲಯವು ಮೂವರು ಅಪರಾಧಿಗಳಿಗೆ 10ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ಒಂದು ಲಕ್ಷ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ಆ ಮೂಲಕ ಮಾದಕ ವಸ್ತು ಸಾಗಾಟ ಮತ್ತು ಮಾರಾಟದ ವಿರುದ್ಧ ಕೊಡಗು ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಗಳಿಗೆ ಬಲ ದೊರೆತಂತಾಗಿದೆ.
ಕಾಸರಗೋಡು ಜಿಲ್ಲೆಯ ಅಹಮ್ಮದ್ ಕಬೀರ್ (37), ಅಬ್ದುಲ್ ಖಾದರ್ (37 ) ಹಾಗೂ ಮಹಮ್ಮದ್ ಮುಜಾಮಿಲ್ (37) ಎಂಬವರೇ ಜೈಲು ಶಿಕ್ಷೆಗೆ ಗುರಿಯಾದವರಾಗಿದ್ದಾರೆ.
ಪ್ರಕರಣದ ವಿವಿರ:
ಭಾಗಮಂಡಲದ ಮಡಿಕೇರಿ ರಸ್ತೆಯಲ್ಲಿರುವ ಐ.ಬಿ ಜಂಕ್ಷನ್ ಸಮೀಪ 2022ರ ಆಗಸ್ಟ್ 29ರಂದು ಕೆಎಲ್ 33 ಎಫ್ 6825 ಮಾರುತಿ ಸೆಲೇರಿಯೋ ವಾಹನದಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಸಾಗಿಸುತ್ತಿರುವ ಕುರಿತು ದೊರೆತ ಖಚಿತ ಮಾಹಿತಿ ಅನ್ವಯ ಭಾಗಮಂಡಲ ಪೊಲೀಸ್ ಠಾಣೆಯ ಪಿಎಸ್ಐ ಪ್ರಿಯಾಂಕ, ಎ.ಎಸ್.ಐ ಬೆಳ್ಳಿಯಪ್ಪ ಹಾಗೂ ಸಿಬ್ಬಂದಿ ಮಹದೇವಸ್ವಾಮಿ ಅವರು ದಾಳಿ ನಡೆಸಿ 1 ಕೆ.ಜಿ 160 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತುವಾದ ಹ್ಯಾಶಿಷ್ ಆಯಿಲ್ ನ್ನು ನಿಷೇಧಿತ ಮಾದಕ ವಸ್ತುವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು.
ಅಲ್ಲದೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಕುರಿತು ತನಿಖಾಧಿಕಾರಿಗಳಾದ ಪ್ರಿಯಾಂಕ ಹಾಗೂ ಬೆಳ್ಳಿಯಪ್ಪ ಅವರುಗಳು ಸಂಪೂರ್ಣ ತನಿಖೆ ಕೈಗೊಂಡು ಆರೋಪಿಗಳ ಮೇಲೆ 2022ರ ನ.21ರಂದು ನಗರದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ಧರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಇದೀಗ ಪ್ರಕರಣದ ಆರೋಪಿಗಳಾದ ಅಹಮ್ಮದ್ ಕಬೀರ್, ಅಬ್ದುಲ್ ಖಾದರ್ ಹಾಗೂ ಮಹಮ್ಮದ್ ಮುಜಾಮಿಲ್ ಅವರುಗಳಿಗೆ ಕಲಂ: 20 (b)(ii)(B)(C) NDPS Act ಅಡಿಯಲ್ಲಿ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ಒಂದು ಲಕ್ಷ ರೂ.ಗಳ ದಂಡ ಮತ್ತು ದಂಡ ಪಾವತಿಸಲು ತಪ್ಪಿದಲ್ಲಿ 3 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಕೆ.ಜಿ.ಅಶ್ವಿನಿ ಅವರು ವಾದ ಮಂಡಿಸಿದ್ದರು. ಪ್ರಕರಣದ ಆರೋಪಿಗಳ ವಿರುದ್ಧ ಸಾಕ್ಯಾಧಾರಗಳನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ತನಿಖಾಧಿಕಾರಿಗಳಾದ ಭಾಗಮಂಡಲ ಠಾಣಾಧಿಕಾರಿ ಪ್ರಿಯಾಂಕ, ಎಎಸ್ಐ ಎಂ.ಸಿ.ಬೆಳ್ಳಿಯಪ್ಪ (ಪ್ರಸಕ್ತ ನಿವೃತ್ತ) ಹಾಗೂ ಸಿಬ್ಬಂದಿಗಳು ಮತ್ತು ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ವಾದ ಮಂಡಿಸಿ ಕಠಿಣ ಜೈಲು ಶಿಕ್ಷೆ ವಿಧಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುವ ಸರ್ಕಾರಿ ಅಭಿಯೋಜಕಿ ಕೆ.ಜಿ.ಅಶ್ವಿನಿ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಅಭಿನಂದಿಸಿದ್ದಾರೆ.