January15, 2026
Thursday, January 15, 2026
spot_img

‘ಎಗ್ ಟ್ರಾನ್ಸ್‌ಪೋರ್ಟ್’ ಮರೆಯಲ್ಲಿ ಡ್ರಗ್ಸ್ ಸಾಗಾಟ: 660 ಕೆಜಿ ಗಾಂಜಾ ಜಪ್ತಿ, ಆರೋಪಿಗಳ ಬಂಧನ

ಹೊಸದಿಗಂತ ಬೀದರ್

ಮೊಟ್ಟೆ ಸಾಗಿಸುವ ವಾಹನದಲ್ಲಿ ಅತ್ಯಂತ ಕುಶಲತೆಯಿಂದ ಅಡಗಿಸಿಟ್ಟಿದ್ದ ಬೃಹತ್ ಪ್ರಮಾಣದ ಗಾಂಜಾ ಸಾಗಾಣಿಕೆ ಜಾಲವನ್ನು ಬೀದರ್ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. ಒಡಿಶಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಬರೋಬ್ಬರಿ 660 ಕೆಜಿ ಗಾಂಜಾವನ್ನು ಜಪ್ತಿ ಮಾಡಿರುವ ಪೊಲೀಸರು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ, NDPS ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ವಿವರ:

ಶನಿವಾರ ಸಂಜೆ, ಜಿಲ್ಲೆಯ ರಾಜೇಶ್ವರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದರ್ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ, ಒಡಿಶಾದ ಮಲ್ಕನ್‌ಗಿರಿಯಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣದ ಹೈದರಾಬಾದ್ ಮಾರ್ಗವಾಗಿ ಸೋಲಾಪುರಕ್ಕೆ ತೆರಳುತ್ತಿದ್ದ ಒಂದು ಟ್ರಾನ್ಸ್‌ಪೋರ್ಟ್ ವಾಹನವನ್ನು ತಡೆ ಹಿಡಿಯಲಾಯಿತು. ಮೇಲ್ನೋಟಕ್ಕೆ ಇದು ಮೊಟ್ಟೆ ಟ್ರೇಗಳನ್ನು ಸಾಗಿಸುವ ವಾಹನದಂತೆ ಕಂಡಿತ್ತು.

ಪೊಲೀಸರು ವಾಹನವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಮೊಟ್ಟೆ ಟ್ರೇಗಳ ಕೆಳಗೆ ಬೃಹತ್ ಪ್ರಮಾಣದ ಮಾದಕ ವಸ್ತು ಅಡಗಿಸಿರುವುದು ಬಯಲಾಗಿದೆ. ವಾಹನದಲ್ಲಿ 330 ಪ್ಯಾಕೇಟ್‌ಗಳಲ್ಲಿ ತುಂಬಿಸಿಟ್ಟಿದ್ದ ಒಟ್ಟು 660 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಯಿತು.

ಆರೋಪಿಗಳ ಹಿನ್ನೆಲೆ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ನೀಡಿರುವ ಮಾಹಿತಿ ಪ್ರಕಾರ, ಬಂಧಿತ ಇಬ್ಬರು ಆರೋಪಿಗಳು ಬೀದರ್ ಜಿಲ್ಲೆಯವರೇ ಆಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳಲ್ಲಿ ಓರ್ವನ ಮೇಲೆ ಈ ಹಿಂದೆಯೇ ಕಲಬುರಗಿ ಜಿಲ್ಲೆಯಲ್ಲಿ NDPS ಕಾಯ್ದೆಯಡಿ ಒಂದು ಪ್ರಕರಣ ದಾಖಲಾಗಿದೆ ಎಂಬುದು ತಿಳಿದುಬಂದಿದೆ.

ಒಡಿಶಾದ ಮಲ್ಕನ್‌ಗಿರಿ ಸಮೀಪದ ತಾಂಡಾಗಳಲ್ಲಿ ಬೆಳೆದ ಗಾಂಜಾವನ್ನು ಸೋಲಾಪುರಕ್ಕೆ ತಲುಪಿಸಲು ಆರೋಪಿಗಳು ಮುಂದಾಗಿದ್ದರು ಎಂಬುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಜಾಲದ ಹಿಂದಿರುವ ಪ್ರಮುಖರನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಎಸ್.ಪಿ. ಪ್ರದೀಪ ಗುಂಟಿ ತಿಳಿಸಿದ್ದಾರೆ.

Most Read

error: Content is protected !!