ಹೊಸದಿಗಂತ ಡಿಜಿಟಲ್ ಡೆಸ್ಕ್:
ತಂದೆ ಮದ್ಯಪಾನ ಮಾಡಿ ತನ್ನ ಮಗನಿಗೆ ಕೃಷಿ ಹೊಂಡದಲ್ಲಿ ಈಜು ಕಲಿಸಲು ಮುಂದಾಗಿ ನಿಯಂತ್ರಣ ಸಿಗದೆ ಮಗನ ಸಮೇತ ಅಪ್ಪನೂ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟ ಘಟನೆ ಕರ್ನಾಟಕದ ಗಡಿಭಾಗ ತಮಿಳುನಾಡಿನ ಸೂಳಗಿರಿ ಸಮೀಪದ ನಂಜಾಪುರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮುನಿರತ್ನಂ(32) ಹಾಗೂ ಸಂತೋಷ್ ಕುಮಾರ್(11) ಎಂದು ಗುರುತಿಸಲಾಗಿದೆ.
ತಂದೆ ಮುನಿರತ್ನಂ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಇನ್ನು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗದೇ ಕುಟುಂಬ ಸಮೇತರಾಗಿ ಜಮೀನಿನ ಬಳಿ ಹೋಗಿದ್ದರು. ಈ ವೇಳೆ ಮುನಿರತ್ನಂ ಮದ್ಯಪಾನ ಮಾಡಿದ್ದು, ಮಗನಿಗೆ ಕೃಷಿ ಹೊಂಡದಲ್ಲಿ ಈಜು ಹೇಳಿಕೊಡುವುದಾಗಿ ಕರೆದುಕೊಂಡು ಹೋಗಿದ್ದಾನೆ.
ಅಪ್ಪ ಕರೆದ ತಕ್ಷಣವೇ ಮಗನೂ ಕೂಡ ಅಂಗಿ ಬಿಚ್ಚಿ ನೀರಿಗೆ ಜಿಗಿದಿದ್ದಾನೆ. ಕೆಲವು ಕ್ಷಣಗಳ ಕಾಲ ಮಗನಿಗೆ ಈಜು ಕಲಿಸಿದ್ದಾನೆ. ಈಜು ಕಲಿಸುತ್ತಾ ಕೃಷಿ ಹೊಂಡದ ಆಳದ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ಅಪ್ಪನಿಗೆ ಹೊಂಡದ ತಳಭಾಗದಲ್ಲಿದ್ದ ಕೆಸರು ಕಾಲಿಗೆ ಅಂಟಿದ್ದು, ಮೇಲೆ ಬರಲು ಕಷ್ಟವಾಗಿದೆ. ಆಗ ಮಗನೂ ಕೂಡ ಮುಳುಗಲು ಆರಂಭಿಸಿ ಇಬ್ಬರು ಪ್ರಾಣ ಬಿಟ್ಟಿದ್ದಾರೆ.
ಸ್ಥಳೀಯ ಠಾಣೆ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಮೃತ ದೇಹಗಳನ್ನು ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.