ದಿಗಂತ ವರದಿ ಕಾರವಾರ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು ಹಲವಾರು ಕಡೆಗಳಲ್ಲಿ ಗುಡ್ಡ ಕುಸಿದು ಆತಂಕಕ್ಕೆ ಕಾರಣವಾಗಿದೆ. ಕಾರವಾರ ತಾಲೂಕಿನ ಕಡವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂದ್ರಾಳಿಯಲ್ಲಿ ಕೈಗಾ ಕಡೆ ಸಾಗುವ ರಸ್ತೆಯಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ತೊಡಕುಂಟಾಗಿದೆ.
ಈ ಭಾಗದಲ್ಲಿ ಗುಡ್ಡ ಕುಸಿತ ಸಾಮಾನ್ಯವಾಗಿದ್ದು ಗುಡ್ಡದ ಮಣ್ಣು ರಸ್ತೆಗೆ ಬಾರದಂತೆ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಇದೀಗ ಕಾಮಗಾರಿ ನಡೆಯುವ ಸ್ಥಳದಲ್ಲೇ ಗುಡ್ಡ ಕುಸಿದು ಗುಡ್ಡದ ಮಣ್ಣು, ಕಲ್ಲು ರಸ್ತೆಯಲ್ಲಿ ತುಂಬಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.
ನಗರದ ಹಬ್ಬುವಾಡದ ಪಿಷರಿಸ್ ಕಾಲನಿಯಲ್ಲಿ ಮಳೆಯಿಂದಾಗಿ ಗುಡ್ಡ ಕುಸಿದು ಗುಡ್ಡದ ಮೇಲಿನ ಕಲ್ಲು ಮನೆಯ ಮೇಲೆ ಬಿದ್ದು ಮನೆಗೆ ಹಾನಿ ಸಂಭವಿಸಿದೆ. ಮಳೆಯಿಂದಾಗಿ ಅರಗಾ ಭಾಗದಲ್ಲಿ ವ್ಯಾಪಕ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಜನ ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದಿದ್ದು ಮುಂಜಾಗ್ರತಾ ಕ್ರಮವಾಗಿ ಮೂರು ಕುಟುಂಬಗಳ 11 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ನೌಕಾನೆಲೆ ಪ್ರದೇಶದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದ್ದು ಅನೇಕ ವಾಹನಗಳ ಬಿಡಿ ಭಾಗಗಳಿಗೆ ನೀರು ತುಂಬಿ ಹಾನಿ ಸಂಭವಿಸಿದೆ.