ಹೊಸದಿಗಂತ ವರದಿ ಚಿಕ್ಕಬಳ್ಳಾಪುರ:
ಇಂದು ಕೇತು ಗ್ರಸ್ತ ಸೂರ್ಯಗ್ರಹಣದ ಹಿನ್ನೆಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿಸುಬ್ರಮಣ್ಯಸ್ವಾಮಿ ದೇವಾಲಯ ಹಾಗೂ ನಂದಿಬೆಟ್ಟದ ತಪ್ಪಲಿನ ಶ್ರೀ ಭೋಗನಂದೀಶ್ವರ ದೇವಾಲಯವನ್ನು ಬಂದ್ ಮಾಡಲಾಗಿದೆ.
ಈ ಕುರಿತಂತೆ ಘಾಟಿಸುಬ್ರಮಣ್ಯಸ್ವಾಮಿ ದೇವಾಲಯ ಆಡಳಿತ ಮಂಡಳಿ ಪ್ರತಿಕ್ರಿಯಿಸಿದ್ದು, ಕೇತು ಗ್ರಸ್ತ ಸೂರ್ಯಗ್ರಹಣ ಹಿನ್ನೆಲೆ ಶ್ರೀ ಘಾಟಿಸುಬ್ರಮಣ್ಯಸ್ವಾಮಿ ದರ್ಶನಕ್ಕೆ ಬೆಳಗ್ಗೆ 10:30ರವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ತದನಂತರ ದೇವಾಲಯದ ಬಾಗಿಲು ಮುಚ್ಚಲಾಗಿದೆ ಗ್ರಹಣದ ನಂತರ ರಾತ್ರಿ 7:45ಕ್ಕೆ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರಲಿದೆ ಎಂದು ತಿಳಿಸಿದ್ದಾರೆ.
ಬೆಳಗ್ಗೆ 6:30 ರಿಂದಲೇ ದೇವರಿಗೆ ಅಭಿಷೇಕ ವಿಶೇಷ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿದ್ದು, 08:00ಕ್ಕೆ ಮಹಾಮಂಗಳಾರತಿ ನೆರವೇರಿಸಲಾಯಿತು.
ಮತ್ತೊಂದೆಡೆ 27 ವರ್ಷಗಳ ನಂತರ ದೀಪಾವಳಿಯಂದು ಕೇತುಗ್ರಸ್ಥ ಸೂರ್ಯಗ್ರಹಣ ಸಂಭವಿಸುತ್ತಿರುವುದರಿಂದ ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದ ತಪ್ಪಲಿನ ಶ್ರೀ ಭೋಗನಂದೀಶ್ವರ ದೇವಾಲಯದ ಬಾಗಿಲು ಬಂದ್ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಿದ್ದು, ತದನಂತರ ದೇವಾಲಯದ ಬಾಗಿಲು ಕ್ಲೋಸ್ ಮಾಡಲಾಗಿದೆ.
ಗ್ರಹಣ ಮುಗಿದ ನಂತರವೂ ಇಂದು ದೇವಾಲಯದ ಬಾಗಿಲು ತೆರಯುವುದಿಲ್ಲ. ಬದಲಾಗಿ ನಾಳೆ ಎಂದಿನಂತೆ ಬೆಳಗ್ಗೆ 7 ಗಂಟೆ ನಂತರ ದೇವರ ದರ್ಶನ ಇರಲಿದೆ.