ರೈಲ್ವೆ ಉದ್ಯೋಗಿಗಳಿಗೆ ದಸರಾ ಗಿಫ್ಟ್: 78 ದಿನಗಳ ವೇತನ ಬೋನಸ್ ನೀಡಲು ಕೇಂದ್ರ ಸರಕಾರ ಗ್ರೀನ್ ಸಿಗ್ನಲ್!

ಹೊಸದಿಗಂತ ವರದಿ, ಹುಬ್ಬಳ್ಳಿ:

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ೨೦೨೨-೨೩ನೇ ಹಣಕಾಸು ವರ್ಷದಲ್ಲಿ ರೈಲ್ವೆ ಸಿಬ್ಬಂದಿಗೆ ೭೮ ದಿನದ ವೇತನಕ್ಕೆ ಸಮನಾದ ಉತ್ಪಾದನೆ ಆಧಾರಿತ ಬೋನಸ್ (ಪಿಎಲ್ ಬಿ) ನೀಡಲು ಅನುಮೋದನೆ ನೀಡಿದೆ.

ಇದರಲ್ಲಿ ರೈಲ್ವೆಯ ಎಲ್ಲಾ ಅರ್ಹ ಸಿಬ್ಬಂದಿ ಅಂದರೆ ಟ್ರಾಕ್ ನಿರ್ವಾಹಕರು, ಲೋಕೋ ಪೈಲಟ್ ಗಳು, ಟ್ರೈನ್ ಮ್ಯಾನೇಜರ್ಸ್ (ಗಾರ್ಡ್ಸ್), ಸ್ಟೇಷನ್ ಮಾಸ್ಟರ್, ಸೂಪರ್ ವೈಸರ್ಸ್, ಟೆಕ್ನಿಷಿಯನ್ಸ್, ಟೆಕ್ನಿಷಿಯನ್ ಹೆಲ್ಪರ್ಸ್, ಪಾಯಿಂಟ್ಸಮನ್, ಸಚಿವಾಲಯದ ಸಿಬ್ಬಂದಿ ಮತ್ತು ಗ್ರೂಪ್ ಸಿ ಸಿಬ್ಬಂದಿ (ಆರ್ ಪಿಎಫ್ ಮತ್ತು ಆರ್ ಪಿಎಸ್ ಎಫ್ ಹೊರತುಪಡಿಸಿ) ಇದಕ್ಕೆ ಒಳಪಡಲಿದ್ದಾರೆ.

ರೈಲ್ವೆ ಸಿಬ್ಬಂದಿಯ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ೧೧,೦೭,೩೪೬ ರೈಲ್ವೆ ಉದ್ಯೋಗಿಗಳಿಗೆ ೧೯೬೮.೮೭ ಕೋಟಿ ರೂ. ಪಿಎಲ್‌ಬಿ ಪಾವತಿಗೆ ಅನುಮೋದನೆ ನೀಡಿದೆ. ೨೦೨೨-೨೦೨೩ರಲ್ಲಿ ರೈಲ್ವೇಯ ಸಾಧನೆ ಉತ್ತಮವಾಗಿತ್ತು. ರೈಲ್ವೆಯು ೧೫೦೯ ಮಿಲಿಯನ್ ಟನ್ ಗಳ ದಾಖಲೆಯ ಸರಕುಗಳನ್ನು ಲೋಡ್ ಮಾಡಿದೆ ಮತ್ತು ಸುಮಾರು ೬.೫ ಬಿಲಿಯನ್ ಪ್ರಯಾಣಿಕರನ್ನು ಸಾಗಿಸಿದೆ.

ಈ ದಾಖಲೆಯ ಸಾಧನೆಗೆ ಹಲವು ಅಂಶಗಳು ಕೊಡುಗೆ ನೀಡಿವೆ. ರೈಲ್ವೆಯಲ್ಲಿ ಸರ್ಕಾರದಿಂದ ದಾಖಲೆಯ ಬಂಡವಾಳ ವೆಚ್ಚದ ಹರಿವು ಹೆಚ್ಚಾಗಿರುವುದರಿಂದ ಮೂಲಸೌಕರ್ಯದಲ್ಲಿನ ಸುಧಾರಣೆ, ಕಾರ್ಯಾಚರಣೆಗಳಲ್ಲಿ ದಕ್ಷತೆ ಮತ್ತು ಉತ್ತಮ ತಂತ್ರಜ್ಞಾನ ಇತ್ಯಾದಿಗಳು ಸೇರಿವೆ.

ಪಿಎಲ್‌ಬಿ ಪಾವತಿಯು ರೈಲ್ವೇ ಉದ್ಯೋಗಿಗಳನ್ನು ಮತ್ತಷ್ಟು ಸಾಧನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲು ಉತ್ತೇಜಿಸಲು ಪ್ರೋತ್ಸಾಹ ನೀಡಲಿದೆ ಎಂದು ರೈಲ್ವೆ ಸಾರ್ವಜನಿಕ ಸಂಪರ್ಕ ಅಕಾರಿ ಪ್ರಕಟಣೆಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!