Monday, September 22, 2025

ಎಲ್ಲರನ್ನು ಒಳಗೊಳ್ಳುವ ಸಮನ್ವಯದ ಮೇಳವೇ ದಸರಾ: ಬಾನು ಮುಷ್ತಾಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಸರೆ ಹಬ್ಬ ಮಾತ್ರ ಅಲ್ಲ. ಇದು ನಾಡಿನ ನಾಡಿಮಿಡಿತ, ಸಂಸ್ಕೃತಿಯ ಉತ್ಸವ. ಎಲ್ಲರನ್ನು ಒಳಗೊಳ್ಳುವ ಸಮನ್ವಯದ ಮೇಳ ಎಂದು ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಬಣ್ಣಿಸಿದ್ದಾರೆ.

ಚಾಮಂಡಿಬೆಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮೈಸೂರು ದಸರೆಗೆ ಚಾಲನೆ ನೀಡಿ ಮಾತನಾಡಿದ ಅವರು,  ನನ್ನ ಆಪ್ತ ಗೆಳತಿ ಬೂಕರ್‌ ಪ್ರಶಸ್ತಿ ಸಿಗಲೆಂದು ಚಾಮುಂಡಿ ತಾಯಿಯ ಬಳಿ ಹರಕೆ ಹೊತ್ತಿದ್ದಳು. ಈ ವಿಶಿಷ್ಟ ಸನ್ನಿವೇಶದಲ್ಲಿ ಹರಕೆ ಈಡೇರಿದೆ. ತಾಯಿ ಚಾಮುಂಡಿ ನನ್ನನ್ನು ಈ ವಿಶೇಷ ಸಂದರ್ಭದಲ್ಲಿ ಕರೆಸಿಕೊಂಡಿದ್ದಾಳೆ. ವೇದಿಕೆ ಮೇಲೆ ನಿಮ್ಮೆದುರು ನಿಲ್ಲುತ್ತಿರುವುದು ನನ್ನ ಜೀವನದ ಅತ್ಯಂತ ಗೌರವದ ಕ್ಷಣ ಎಂದು ಆರಂಭದಲ್ಲೇ ಹೇಳಿದರು.

ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಈ ನಾಡಿನ ನಾಡಿ ಮಿಡಿತ, ಸ್ಪಂದನೆಯಿದೆ. ವಿಭಿನ್ನತೆಯಲ್ಲಿ ಏಕತೆ ಇರುವ ಹಬ್ಬವಿದು. ಮೈಸೂರಿನ ಉರ್ದು ಭಾಷಿಕರು ನವರಾತ್ರಿ ಪ್ರತಿ ದಿನಕ್ಕೂ ಒಂದೊಂದು ಹೆಸರು ಇಟ್ಟು ಕೊಂಡಿದ್ದಾರೆ. ಸಿಲ್ಹಿಂಗನ್ ಎಂದು ದಸರಾಕ್ಕೆ ಉರ್ದು ವಿನಲ್ಲಿ ಹೆಸರಿಟ್ಟುಕೊಂಡಿದ್ದಾರೆ. ಇದು ಎಲ್ಲರೂ ಒಟ್ಟಾಗಿ ಸೇರಿ ಆಚರಿಸುವ ಉತ್ಸವ ಎಂದು ಹೇಳಿದರು.

ನನ್ನ ಮಾವ ಮೈಸೂರು ಮಹಾರಾಜರ ಅಂಗರಕ್ಷಕರಾಗಿದ್ದರು. ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಮರನ್ನು ನಂಬಿದ್ದರು. ತಮ್ಮ ರಕ್ಷಕರನ್ನಾಗಿ ಮಾಡಿಕೊಂಡಿದ್ದರು. ಮುಸ್ಲಿಮರನ್ನು ಅನುಮಾನದಿಂದ ನೋಡಿರಲಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ