ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಜಂಬೂಸವಾರಿಯನ್ನು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಆನೆಗಳು ಇದೀಗ ಮೈಸೂರಿನಿಂದ ಸ್ವಸ್ಥಾನದತ್ತ ತೆರಳಿವೆ.
ಅರಮನೆ ಆವರಣದಲ್ಲಿ ಮೈಸೂರು ಜಿಲ್ಲಾಡಳಿತ ವತಿಯಿಂದ ಗಜಪಡೆಗೆ ವಿಶೇಷ ಪೂಜೆಯನ್ನ ಸಲ್ಲಿಸಲಾಯಿತು. 14 ಆನೆಗಳ ಒಟ್ಟಿಗೆ ನಿಲ್ಲಿಸಿ ಪೂಜೆ ಮಾಡಲಾಗಿದ್ದು, ಬಳಿಕ ಆನೆಗಳಿಗೆ ಪ್ರಿಯವಾಗಿರುವ ಖಾದ್ಯಗಳನ್ನು ನೀಡಲಾಯಿತು.
ಸೆಪ್ಟೆಂಬರ್ 5ರಿಂದ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಅಭಿಮನ್ಯು ಮತ್ತು ತಂಡ ಯಶಸ್ವಿಯಾಗಿ ಜಂಬೂಸವಾರಿಯ ನಡೆಸಿಕೊಟ್ಟಿವೆ. ಬಳಿಕ ಯಾವುದೇ ರೀತಿಯ ಪ್ರತಿರೋಧ ತೋರದೆ ಆನೆಗಳು ಲಾರಿಯನ್ನೇರಿವೆ. ಎಲ್ಲಾ ಆನೆಗಳು ಲಾರಿ ಏರಿದ ಬಳಿಕ ಅಂತಿಮವಾಗಿ ಕ್ಯಾಪ್ಟನ್ ಅಭಿಮನ್ಯು ಲಾರಿಯನ್ನೇರಿದ್ದಾನೆ. ಆಯಾಯ ಆನೆಗಳ ಜೊತೆ ಮಾವುತರು, ಕಾವಾಡಿಗಳು ಮತ್ತು ಕುಟುಂಬಸ್ಥರು ಲಾರಿಯನ್ನೇರಿ ಆನೆ ಶಿಬಿರಗಳತ್ತ ತೆರಳಿದರು.
ದಸರಾ ಜಂಬೂಸವಾರಿಯಲ್ಲಿ ಗಜಪಡೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಡಿಸಿಎಫ್ ಸೌರಭ್ ಕುಮಾರ್ ತಿಳಿಸಿದರು
ಮಾವುತರು, ಕಾವಾಡಿಗಳು ಮತ್ತು ಇತರೆ ಸಿಬ್ಬಂದಿ ನೆರವಿನಿಂದ ದಸರಾ ಮಹೋತ್ಸವ ಸುಸೂತ್ರವಾಗಿ ನೆರವೇರಿದೆ. ಈ ಬಾರಿ ಮಹೇಂದ್ರ, ಧನಂಜಯ ಭವಿಷ್ಯದ ಅಂಬಾರಿ ಆನೆಗಳಾಗುವ ಸೂಚನೆ ಸಿಕ್ಕಿದ್ದು, ಸಣ್ಣ-ಪುಟ್ಟ ವ್ಯತ್ಯಾಸಗಳ ನಡುವೆ ದಸರಾ ಅದ್ಧೂರಿಯಾಗಿ ನೆರವೇರಿದೆ. ಇನ್ನ ಯಾವುದೇ ತೊಂದರೆ ಇಲ್ಲದೇ ಜಂಬೂಸವಾರಿ ಮೆರವಣಿಗೆ ನೆರವೇರಿದ್ದು ಸಂತಸ ತಂದಿದೆ ಎಂದು ಡಿಸಿಎಫ್ ಸೌರಭ್ ಕುಮಾರ್ ತಿಳಿಸಿದರು.
ಈ ಬಾರಿಯ ದಸರಾ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ನೆರವೇರಿದೆ ಎಂದು ಮೈಸೂರು ಡಿಸಿ ಡಾ.ಕೆ.ವಿ.ರಾಜೇಂದ್ರ ಅಭಿಪ್ರಾಯಪಟ್ಟರು. ಯಶಸ್ವಿ ದಸರಾ ನಡೆಸಿಕೊಟ್ಟ ಆನೆಗಳನ್ನ ಬೀಳ್ಕೊಡಲಾಗಿದೆ. ಮಾವುತರು, ಕಾವಾಡಿಗಳ ಕೋರಿಕೆ ಮೇರೆಗೆ ಗೌರವ ಧನವನ್ನು ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷ ಮಾವುತರು, ಕಾವಾಡಿಗಳಿಗೆ ತಲಾ ಹತ್ತು ಸಾವಿರ ರೂಪಾಯಿ ಗೌರವ ಧನ ನೀಡಲಾಗಿತ್ತು. ಆದರೆ ಈ ಬಾರಿ 55 ಮಂದಿಗೆ ತಲಾ 15 ಸಾವಿರ ರೂಪಾಯಿ ಗೌರವ ಧನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದರು.