ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿಯಲ್ಲಿ ಧೂಳು ಮಿಶ್ರಿತ ಬಿರುಗಾಳಿ ಮತ್ತು ಭಾರೀ ಬಿರುಗಾಳಿ ಬೀಸುತ್ತಿದ್ದು,ಈ ಹಿನ್ನೆಲೆ ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ಪ್ರತಿಕೂಲ ಹವಾಮಾನದಿಂದಾಗಿ 15ಕ್ಕೂ ಹೆಚ್ಚು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ದೆಹಲಿಯಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ, ದೆಹಲಿ ವಿಮಾನ ನಿಲ್ದಾಣದಲ್ಲಿ ಕೆಲವು ವಿಮಾನಗಳ ಹಾರಾಟದಲ್ಲಿ ತೊಂದರೆ ಉಂಟಾಗಿದೆ. ಇತ್ತೀಚಿನ ವಿಮಾನ ನವೀಕರಣಗಳಿಗಾಗಿ ಪ್ರಯಾಣಿಕರು ತಮ್ಮ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ’ ಎಂದು ವಿಮಾನ ನಿಲ್ದಾಣದ ನಿರ್ವಾಹಕ DIAL Xನಲ್ಲಿ ಪೋಸ್ಟ್ ಮಾಡಿದೆ.
ದೆಹಲಿ ಮತ್ತು ಜೈಪುರದಲ್ಲಿ ಧೂಳು ಮಿಶ್ರಿತ ಬಿರುಗಾಳಿ ಬೀಸುತ್ತಿದ್ದು, ಇದು ಟೇಕ್‌ಆಫ್ ಮತ್ತು ಲ್ಯಾಂಡಿಂಗ್‌ಗಳ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ವಾಯು ಸಂಚಾರ ದಟ್ಟಣೆಗೆ ಕಾರಣವಾಗಬಹುದು ಎಂದು ಇಂಡಿಗೋ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆ ದೆಹಲಿ ಮತ್ತು ಪಕ್ಕದ NCRಗೆ ಯೆಲ್ಲೋ ಅಲರ್ಟ್ ನೀಡಿದ್ದು, ಮುಂಬರುವ ಗಂಟೆಗಳಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಬಗ್ಗೆ ಎಚ್ಚರಿಕೆ ನೀಡಿದೆ.
ಇನ್ನು ಪೂರ್ವ ದೆಹಲಿಯಲ್ಲಿ ಬಲವಾದ ಬಿರುಗಾಳಿಯ ಸಮಯದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಗೋಡೆ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಬಲವಾದ ಗಾಳಿಯಿಂದಾಗಿ ಮರಗಳ ಕೊಂಬೆಗಳು ಉರುಳಿಬಿದ್ದಿವೆ. ಬಿದ್ದ ಮರದ ಕಾಂಡದ ಕೆಳಗೆ ಮೋಟಾರ್ ಸೈಕಲ್ ನಜ್ಜುಗುಜ್ಜಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
ಹವಾಮಾನದಲ್ಲಿನ ಹಠಾತ್ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಹವಾಮಾನ ಇಲಾಖೆ (ಐಎಂಡಿ) ನಗರಕ್ಕೆ ರೆಡ್ ಅಲರ್ಟ್ ನೀಡಿತ್ತುಮುಂದಿನ ಮೂರು ಗಂಟೆಗಳ ಕಾಲ ದೆಹಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್), ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಪಕ್ಕದ ಪ್ರದೇಶಗಳಲ್ಲಿ ಮಿಂಚು ಮತ್ತು ಬಿರುಗಾಳಿಯೊಂದಿಗೆ ಮಧ್ಯಮದಿಂದ ತೀವ್ರವಾದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.