ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆ.ಎಸ್. ಈಶ್ವರಪ್ಪ ಅವರ ಮನವೊಲಿಕೆ ಪ್ರಯತ್ನ ಕೈಬಿಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಹಿರಿಯರು, ಕೆಲವು ತಪ್ಪು ಮಾಹಿತಿಗಳು ಅವರಿಗೆ ತಲುಪಿವೆ. ಸತ್ಯದ ಅರಿವಾದ ಮೇಲೆ ಎಲ್ಲವೂ ಸರಿಹೋಗಲಿದೆ ಎಂದು ಹೇಳಿದ್ದಾರೆ.
ಡಿ.ವಿ. ಸದಾನಂದ ಗೌಡ ಕಾಂಗ್ರೆಸ್ ಸೇರ್ಪಡೆ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಾಂಗ್ರೆಸ್ ನಾಯಕರಿಗೆ ಅವರ ನಾಯಕರಿಗಿಂತ ನಮ್ಮ ಪಕ್ಷದ ನಾಯಕರ ಮೇಲೆಯೇ ಪ್ರೀತಿ ಹೆಚ್ಚು. ಕಳೆದೊಂದು ವಾರದ ಎಂಬಿ ಪಾಟೀಲ್ ಹಾಗೂ ಇತರ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಬಿಜೆಪಿ ನಾಯಕರ ಮೇಲೆ ಅವರಿಗೆ ವಿಶ್ವಾಸ ಬಂದಂತಿದೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಪಕ್ಷ ಬಿಡಲ್ಲ, ಬಿಜೆಪಿಯಲ್ಲೇ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಗೆ ಬಿಜೆಪಿ ಜೆಡಿಎಸ್ ಪಕ್ಷದ ಮೈತ್ರಿ ವಿಚಾರದಲ್ಲಿ ಜೆಡಿಎಸ್ಗೆ ಸಮಾಧಾನ ಆಗುವಂಥ ತೀರ್ಮಾನವನ್ನು ಬಿಜೆಪಿ ಹೈಕಮಾಂಡ್ ಮಾಡಲಿದೆ. ಅಸಮಾಧಾನ ಶಮನವಾಗಲು ಯಾವಾಗ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ಜೆಡಿಎಸ್ ಮತ್ತು ನಮ್ಮ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಹೇಳಿದರು.